ಎರಡನೇ ಹಂತದ ಒಳಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಎಂ.ಟಿ.ಕೃಷ್ಣಪ್ಪ
ತುರುವೇಕೆರೆ: ಸುಮಾರು ಆರೂವರೆ ಕೋಟಿ ರೂ ವೆಚ್ಚದಲ್ಲಿ ಪಟ್ಟಣದ ಎರಡನೇ ಹಂತದ ಒಳಚರಂಡಿ ಕಾಮಗಾರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಇಂದು ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ, ಪಟ್ಟಣದ ಪ್ರತಿ ಮನೆಗೂ ಒಳಚರಂಡಿ ಸಂಪರ್ಕ ಕಲ್ಪಿಸಿ ಪಟ್ಟಣದ ಸ್ವಚ್ಛತೆಗೆ, ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕಳೆದ 2006 ರಲ್ಲಿ ತುಮಕೂರು ಜಿಲ್ಲೆಯಲ್ಲೇ ಮೊದಲ ಬಾರಿಗೆ ತುರುವೇಕೆರೆ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ಕಾಮಗಾರಿ ಉತ್ತಮ ರೀತಿಯಲ್ಲಿ ಪ್ರಾರಂಭವಾದರೂ ತದನಂತರದಲ್ಲಿ ತಾಂತ್ರಿಕ ಕಾರಣಗಳು, ಮ್ಯಾನ್ ಹೋಲ್ ಗಳು ಕೆಲವೆಡೆ ಬ್ಲಾಕ್ ಆಗಿ ಸಮಸ್ಯೆಯಾಗಿದ್ದ ಕಾರಣ ಪೂರ್ಣ ಪ್ರಮಾಣದಲ್ಲಿ ಎಲ್ಲಾ ಕುಟುಂಬಕ್ಕೂ ಒಳಚರಂಡಿ ಸೌಲಭ್ಯ ಒದಗಿಸಲಾಗಿರಲಿಲ್ಲ. ಅದಲ್ಲದೆ ಈಗ ಹೊಸ ಬಡಾವಣೆಗಳು ತಲೆಎತ್ತಿದ್ದು, ಮನೆಗಳು ನಿರ್ಮಾಣವಾಗಿದೆ. ಅವುಗಳಿಗೂ ಒಳಚರಂಡಿ ಸಂಪರ್ಕ ಒದಗಿಸುವ ದೃಷ್ಟಿಯಿಂದ ಎರಡನೇ ಹಂತದ ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಸರ್ಕಾರದಿಂದ ಆರೂವರೆ ಕೋಟಿ ರೂ ಅನುದಾನ ಬಿಡುಗಡೆ ಮಾಡಿಸಿ ಈ ದಿನ ಚಾಲನೆ ನೀಡಲಾಗಿದೆ ಎಂದರು.
ಎರಡನೇ ಹಂತದ ಕಾಮಗಾರಿಯಲ್ಲಿ ಪಟ್ಟಣದ ಎಲ್ಲಾ ಮನೆಗಳಿಗೂ ಒಳಚರಂಡಿ ಸೌಲಭ್ಯ ಒದಗಿಸಲಾಗುತ್ತದೆ. ಅಲ್ಲದೆ ಮೊದಲ ಹಂತದಲ್ಲಿ ನಿರ್ಮಾಣವಾಗಿ ಬ್ಲಾಕ್ ಆಗಿರುವ ಮ್ಯಾನ್ ಹೋಲ್ ಗಳ ದುರಸ್ಥಿಯನ್ನು ಸಹ ಈ ವೇಳೆ ಮಾಡಲಾಗುತ್ತದೆ ಎಂದ ಅವರು, ಇಲ್ಲಿ ಕೆಲವು ರೋಲ್ ಕಾಲ್ ಗಿರಾಕಿಗಳಿದ್ದಾರೆ, ಅವರಿಗೆಲ್ಲಾ ಹೆದರದೆ ಕೆಲಸ ಮಾಡಿ, ನಾನಿದ್ದೇನೆ. ಚಿಲ್ಲರೆಗಳಿಗೆ ಹೆದರುವ ಅಗತ್ಯವಿಲ್ಲ. ಗುಣಮಟ್ಟದ ಕಾಮಗಾರಿ ನಡೆಸಿ ಎಂದು ಶಾಸಕರು ಗುತ್ತಿಗೆದಾರರಿಗೆ ಧೈರ್ಯ ತುಂಬಿದರು.
ಅಮೃತ ಕನ್ಸ್ಟ್ರಕ್ಷನ್ ಸಂಸ್ಥೆಯ ಆನಂದ್ ಗೌಡ ಮಾತನಾಡಿ, ಕರ್ನಾಟಕ ನಗರ ಮತ್ತು ಒಳಚರಂಡಿ ಇಲಾಖೆ ವತಿಯಿಂದ ಸುಮಾರು 8 ಕೋಟಿ 31 ಲಕ್ಷ (ಜಿ.ಎಸ್.ಟಿ. ಸೇರಿ) ವೆಚ್ಚದಲ್ಲಿ ಪಟ್ಟಣದ ಎರಡನೇ ಹಂತದ ಒಳಚರಂಡಿ ಕಾಮಗಾರಿಗೆ ಶಾಸಕ ಎಂ.ಟಿ.ಕೃಷ್ಣಪ್ಪನವರು ಚಾಲನೆ ನೀಡಿದ್ದಾರೆ. ಪಟ್ಟಣದಲ್ಲಿರುವ 2950 ಮನೆಗಳಿಗೆ ಒಳಚರಂಡಿ ಸಂಪರ್ಕವನ್ನು ನೀಡುವ ಹಾಗೂ ಮೊದಲನೇ ಹಂತದಲ್ಲಿ ಯಾವುದು ಪೂರ್ಣಗೊಂಡಿಲ್ಲ ಅದನ್ನೂ ಸಹ ಈ ಎರಡನೇ ಹಂತದ ಕಾಮಗಾರಿಯಲ್ಲಿ ಪೂರ್ಣಗೊಳಿಸಲಾಗುವುದು. ಮುಂದಿನ 6 ರಿಂದ 8 ತಿಂಗಳ ಅವಧಿಯಲ್ಲಿ ಪೂರ್ಣ ಕಾಮಗಾರಿಯನ್ನು ಗುಣಮಟ್ಟದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.
ಇದೇ ವೇಳೆ ಶಾಸಕ ಎಂ.ಟಿ.ಕೃಷ್ಣಪ್ಪ ಅವರನ್ನು ಗುತ್ತಿಗೆದಾರರಾದ ಆನಂದ್ ಗೌಡ, ರಂಜನ್ ಶಾಲು ಹೊದಿಸಿ ಸನ್ಮಾನಿಸಿದರು. ಒಳಚರಂಡಿ ಕಾಮಗಾರಿಗೆ 3 ಗುಂಟೆ ಜಮೀನು ನೀಡಿದ ತಿಮ್ಮಯ್ಯ ಅವರನ್ನು ಶಾಸಕ ಎಂ.ಟಿ.ಕೃಷ್ಣಪ್ಪ ಗೌರವಿಸಿದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸ್ವಪ್ನ ನಟೇಶ್, ಪಪಂ ಸದಸ್ಯರಾದ ಎನ್.ಆರ್.ಸುರೇಶ್, ಆರ್.ಮಧು, ಆಶಾರಾಜಶೇಖರ್, ರುದ್ರೇಶ್, ಮುಖಂಡರಾದ ಶ್ರೀನಿವಾಸಮೂರ್ತಿ, ಸುನಿಲ್, ರಂಗನಾಥ್, ಪಪಂ ಅಧಿಕಾರಿಗಳಾದ ಪ್ರಶಾಂತ್ ಭದ್ರಣ್ಣನವರ್, ಸದಾನಂದ್, ನರಸಿಂಹಮೂರ್ತಿ, ಇಂಜಿನಿಯರ್ ಹರೀಶ್ ಸೇರಿದಂತೆ ನಾಗರೀಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ