ತುಮಕೂರು: ಜಗತ್ತಿಗೆ ಶಾಂತಿ ಹಾಗೂ ಅಹಿಂಸೆಯ ಅಸ್ತ್ರಗಳನ್ನು ಕೊಟ್ಟಂತಹವರು ಮಹಾತ್ಮ ಗಾಂಧೀಜಿ, ಸರಳತೆಯನ್ನು ತಿಳಿಸಿಕೊಟ್ಟವರು ಲಾಲ್ ಬಹದ್ದೂರ್ ಶಾಸ್ತ್ರೀಜಿ. ಇಂತಹ ಮಹನೀಯರು ಹಾಕಿ ಕೊಟ್ಟಂತಹ ಆದರ್ಶಗಳನ್ನು ಅನುಕರಣೆ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಏರ್ಪಡಿಸಲಾಗಿದ್ದ 145ನೇ ಮಹಾತ್ಮ ಗಾಂಧಿ ದಿನಾಚರಣೆ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯ ಅವರ ಜನ್ಮದಿನಾಚರಣೆ ಹಾಗೂ ಪ್ರಬಂಧ ವಿಜೇತ ಅಭ್ಯರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು, ತುಮಕೂರು ಜಿಲ್ಲೆಗೆ ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಪೂರ್ವ ಚಳುವಳಿ ಸಂಬಂಧ ಜಾಗೃತಿ ಮೂಡಿಸಲು 1927ರ ಆಗಸ್ಟ್ ತಿಂಗಳಿನಲ್ಲಿ ಕಸ್ತೂರಬಾರವರೊಂದಿಗೆ ಆಗಮಿಸಿದ್ದರು ಎಂದು ಸ್ಮರಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಂಗಿದ್ದ ಮಹಾತ್ಮ ಗಾಂಧೀಜಿಯವರು ಬಹಿರಂಗ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ್ದರು. ಮರುದಿನ ಬೆಳಿಗ್ಗೆಯೇ ಕೋತಿತೋಪು ಬಳಿಯ ಹರಿಜನರ ಕೇರಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ, ಅದೇ ದಿನ ಸಂಜೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಾಸ್ಟೇಲ್ಗೆ ಭೇಟಿ ನೀಡಿದ್ದರು ಎಂದು ಸ್ಮರಿಸಿದರು.
ಭಾರತದ ಜನತೆಗೆ ಗಾಂಧೀಜಿಯವರು ನೀಡಿದ ಕೊಡುಗೆ ಎಂದರೆ ಅದು ಸತ್ಯಕ್ಕೆ ಆಗ್ರಹ ಅಂದರೇ ಸತ್ಯಾಗ್ರಹ, ಬ್ರಿಟೀಷರ ವಿರುದ್ದ ಹೋರಾಡಲು ಅವರು ಬಳಸಿದ ಅಸ್ತçವೆಂದರೆ ಶಾಂತಿ, ಅಹಿಂಸೆ ಹಾಗೂ ಧರ್ಮ. ಈ ಮೂರು ಅಸ್ತçಗಳೊಂದಿಗೆ ಬ್ರಿಟೀಷರ ಪಾರುಪತ್ಯವನ್ನು ಮಾಹಾತ್ಮ ಗಾಂಧಿಜಿಯವರು ಕೊನೆಗಾಣಿಸಿದರು ಎಂದು ತಿಳಿಸಿದರು.
ಭಾರತದ ಅಂತರಾಷ್ಟ್ರೀಯ ನೀತಿಯೂ ಕೂಡ ಶಾಂತಿಯ ಸಂದೇಶವನ್ನೆ ಸಾರುತ್ತಿದೆ. ಎಲ್ಲರೂ ಶಾಂತಿ ಪ್ರಿಯರಾಗಬೇಕು, ದ್ವೇಷ, ಅಸೂಯೆಗಳಿಂದ ಏನ್ನನ್ನೂ ಸಾಧಿಸಲಾಗದು. ಗಾಂಧೀಯವರ ಈ ಸಂದೇಶಗಳಿಂದಲೇ ಜಗತ್ತಿನ ಬಹುತೇಕ ಜನರು ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಮಾತನಾಡಿ, ಶೋಷಿತ ಜನಾಂಗದವರ ಅದರಲ್ಲೂ ಹರಿಜನರ ಪರ ಧ್ವನಿಯೆತ್ತಿದ್ದ ಮಹಾತ್ಮ ಗಾಂಧೀಜಿಯವರು ‘ಹರಿಜನ ಪತ್ರಿಕೆ’ಯ ಮೂಲಕ ಶೋಷಿತ ಸಮುದಾಯದ ಸಮಸ್ಯೆಗಳನ್ನು ಸಮಾಜಕ್ಕೆ ತೋರಿಸಿದ್ದರು.
ಇಂದಿನ ಪೀಳಿಗೆ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಆದರ್ಶಗಳನ್ನು ಪಾಲಿಸಬೇಕಿದೆ. ಇಂದಿನ ಕ್ಷೀರಾಕ್ರಾಂತಿಗೆ ಲಾಲ್ ಬಹದ್ದೂರ್ ಶಾಸ್ತ್ರೀಯವರು ಕಾರಣೀಭೂತರಾಗಿದ್ದಾರೆ ಎಂದು ಸ್ಮರಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಏರ್ಪಡಿಸಿದ್ದ ಮಹಾತ್ಮ ಗಾಂಧಿ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಈ ಸಂದರ್ಭ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ನಗರ ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಉಪವಿಭಾಗಾಧಿಕಾರಿ ಗೌರವ್ಕುಮಾರ್ಶೆಟ್ಟಿ ಅವರುಗಳು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣಪತ್ರ ಹಾಗೂ ನಗದು ಬಹುಮಾನ ವಿತರಿಸಿದರು.
ಪ್ರೌಢಶಾಲಾ ವಿಭಾಗದಲ್ಲಿ ಪಾವಗಡದ ಗಂಗೋತ್ರಿ, ಶಿರಾ ತಾಲ್ಲೂಕಿನ ಚೇತನ ಜಿ,ಎಸ್., ತಿಪಟೂರಿನ ನವ್ಯಶ್ರೀ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿ ಪಡೆದಿದ್ದಾರೆ. ಪದವಿ ಪೂರ್ವ ವಿಭಾಗದಲ್ಲಿ ತುಮಕೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ತಾರಾ, ಶ್ರೀನಿವಾಸ ಡಿ.ಕೆ., ರೇಣುಕಾಪ್ರಸಾದ್ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಗಳಿಸಿದ್ದಾರೆ. ಪದವಿ/ಸ್ನಾತಕೋತ್ತರ ವಿಭಾಗದಲ್ಲಿ ತುಮಕೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಆಂಗ್ಲ ಭಾಷಾ ವಿಭಾಗದ ಸಹನ ವಿ, ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಡಿ.ಎನ್.ಚಂದನ್ ಮತ್ತು ಚಿಕ್ಕನಾಯಕನಹಳ್ಳಿ ಪ್ರಥಮ ದರ್ಜೆ ಕಾಲೇಜಿನ ಕೆ.ಸಹನ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಗಳಿಸುವ ಮೂಲಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಾರ್ಯಕ್ರಮದಲ್ಲಿ ನಗರ ಶಾಸಕ ಜ್ಯೋತಿಗಣೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಉಪವಿಭಾಗಾಧಿಕಾರಿ ಗೌರವ್ಕುಮಾರ್ಶೆಟ್ಟಿ, ಜಿಲ್ಲಾ ವಾರ್ತಾಧಿಕಾರಿ ಮಮತ ಎಂ.ಆರ್., ತಹಶೀಲ್ದಾರ್ ಸಿದ್ದೇಶ್, ವಾರ್ತಾ ಸಹಾಯಕ ಯೋಗೀಶ್ಗೌಡ, ಪ್ರಶಿಕ್ಷಣಾರ್ಥಿ ನರಸಿಂಹಮೂರ್ತಿ ಎನ್.ಕೆ., ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
*