ಕೊಡಗೀಹಳ್ಳಿ ಗ್ರಾಪಂನಿಂದ 4 ಲಕ್ಷ ಅನುದಾನ / ಸೂಳೆಕೆರೆ ಸರ್ಕಾರಿ ಶಾಲೆಯಲ್ಲಿ ಹೈಟೆಕ್ ಶೌಚಾಲಯ ಉದ್ಘಾಟನೆ
ತುರುವೇಕೆರೆ : ತಾಲ್ಲೂಕಿನ ಕೊಡಗೀಹಳ್ಳಿ ಗ್ರಾಮ ಪಂಚಾಯ್ತಿ ವತಿಯಿಂದ ಪಂಚಾಯ್ತಿ ವ್ಯಾಪ್ತಿಯ ಸೂಳೆಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸುಮಾರು 4 ಲಕ್ಷ ರೂ ವೆಚ್ಚದಲ್ಲಿ ಶಾಲೆಯ ಮಕ್ಕಳಿಗಾಗಿ ಹೈಟೆಕ್ ಶೌಚಾಲಯವನ್ನು ನಿರ್ಮಿಸಿದ್ದು, ಸ್ವಾತಂತ್ರ್ಯ ದಿನಾಚರಣೆಯಂದು ಗ್ರಾಪಂ ಅಧ್ಯಕ್ಷ ಕೊಡಗೀಹಳ್ಳಿ ಕಿರಣ್ ಉದ್ಘಾಟಿಸಿದರು.
ನಂತರ ಮಾತನಾಡಿದ ಗ್ರಾಪಂ ಅಧ್ಯಕ್ಷ ಕಿರಣ್, ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಸರ್ಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದೆ. ಉತ್ತಮ ಗುಣಮಟ್ಟದ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡಲು ಸರ್ಕಾರ ನೇಮಿಸಿರುತ್ತದೆ. ಉಚಿತ ಶಿಕ್ಷಣ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ ಎಲ್ಲವನ್ನೂ ನೀಡುತ್ತದೆ. ಆದರೆ ಪೋಷಕರು ಸರ್ಕಾರಿ ಶಾಲೆಗಳ ಬಗ್ಗೆ ತಾತ್ಸಾರ ಮನೋಭಾವ ಹೊಂದಿ ಮಕ್ಕಳನ್ನು ಸಹಸ್ರಾರು ರೂ ಪಾವತಿಸಿ ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
ಕೊಡಗೀಹಳ್ಳಿ ಗ್ರಾಮ ಪಂಚಾಯ್ತಿ ವತಿಯಿಂದ ಶಾಲೆಯ ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸುಮಾರು 4 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯವನ್ನು ನಿರ್ಮಿಸಿಕೊಡಲಾಗಿದೆ. ಇದಲ್ಲದೆ ಅಡುಗೆ ಮನೆ ಕೊಠಡಿ ನಿರ್ಮಾಣಕ್ಕೂ ಈ ದಿನ ಶಂಕುಸ್ಥಾಪನೆ ನೆರವೇರಿಸಿದ್ದು, ಉತ್ತಮ ಗುಣಮಟ್ಟದ ಅಡುಗೆ ಮನೆ ನಿರ್ಮಿಸಿಕೊಡಲಾಗುವುದು. ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಹಾಗೂ ಶುದ್ಧ ಕುಡಿಯುವ ನೀರನ್ನು ಶಿಕ್ಷಕರು, ಅಡುಗೆಯವರು ನೀಡಬೇಕು. ಆಹಾರದಲ್ಲಿ ವ್ಯತ್ಯಾಸವಾದರೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಈ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕೆಂದರು.
ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಗ್ರಾಪಂ ಅಧ್ಯಕ್ಷ ಕಿರಣ್ ಧ್ವಜಾರೋಹಣ ಮಾಡಿದರು. ಗ್ರಾಪಂ ಸದಸ್ಯರಾದ ಸವಿತಯೋಗೀಶ್ ಕುಮಾರ್, ಪಿಡಿಒ ಗೋಪಿನಾಥ್, ಕಾರ್ಯದರ್ಶಿ ಮಂಜಯ್ಯ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ದೊರೆಸ್ವಾಮಿ, ಶಾಲೆಯ ಶಿಕ್ಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ