“ಅಮೃತವಾಣಿ” ವರದಿಗೆ ಶಾಸಕರ ಸ್ಪಂದನೆ/ ಕಾಲೇಜಿನಲ್ಲಿ ಯಾವುದೇ ಸಭೆ ನಡೆಸಿಲ್ಲ/ ಸಮವಸ್ತ್ರ ವಿಚಾರ ನನ್ನ ಗಮನಕ್ಕೆ ಬಂದಿಲ್ಲ
ತುರುವೇಕೆರೆ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕೊಡಿಸುತ್ತೇವೆಂದು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸೆಪ್ಟಂಬರ್ 27 ರಂದು “ಅಮೃತವಾಣಿ” ದಿನಪತ್ರಿಕೆಯು “ತುರುವೇಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆಯೇ ಸಮವಸ್ತ್ರ ಹಗರಣ..??” ಎಂಬ ಶೀರ್ಷಿಕೆಯಡಿ ವಿಸೃತ ವರದಿ ಮಾಡಿ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಸೆಳೆಯುವ ಪ್ರಯತ್ನ ಮಾಡಿತ್ತು. ಈ ವರದಿಗೆ ಅತ್ಯಧಿಕ ಪ್ರಶಂಸಾತ್ಮಕ ಕರೆಗಳು ಬಂದಿದ್ದು, ವರದಿಯು ರೈತಪರ, ಜನಪರ ಹಾಗೂ ಪ್ರಮುಖವಾಗಿ ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಶಾಸಕ ಎಂ.ಟಿ.ಕೃಷ್ಣಪ್ಪನವರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ.
ವರದಿಯ ಬಗ್ಗೆ ಅಮೃತವಾಣಿ ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪನವರು, ನಾಲ್ಕನೇ ಬಾರಿಗೆ ಶಾಸಕರಾದ ನಂತರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಯಾವುದೇ ಸಭೆಯನ್ನು ನಾನು ಕರೆದಿಲ್ಲ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಸಮವಸ್ತ್ರಕ್ಕೆ ಹಣ ವಸೂಲಿ ಮಾಡಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿರುವ ಬಗ್ಗೆ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರಿಂದ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುತ್ತೇನೆ. ಗ್ರಾಮೀಣ ಪ್ರದೇಶದಿಂದ ವ್ಯಾಸಂಗಕ್ಕೆಂದು ಬರುವ ರೈತರು, ಕೂಲಿಕಾರ್ಮಿಕರು, ಶ್ರಮಿಕ ವರ್ಗ ಹಾಗೂ ಬಡ ಕುಟುಂಬದ ಮಕ್ಕಳಿಗೆ ಸಮಸ್ಯೆಯಾಗಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದರು.
ಈ ಹಿಂದೆ ಮೂರು ಬಾರಿ ಶಾಸಕನಾದಾಗಲೂ ಕ್ಷೇತ್ರದ ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯಾವಂತರಾಗಲೆಂಬ ಹಂಬಲದಿಂದ ಶಾಲಾ ಕೊಠಡಿಗಳು, ಪದವಿ ಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು, ಮೊರಾರ್ಜಿ ದೇಸಾಯಿ, ಕಿತ್ತೂರು ಚೆನ್ನಮ್ಮ, ಡಾ.ಅಂಬೇಡ್ಕರ್, ಇಂದಿರಾಗಾಂಧಿ ವಸತಿ ಶಾಲೆಗಳು, ಪಾಲಿಟೆಕ್ನಿಕ್ ಕಾಲೇಜು ಮಂಜೂರು ಮಾಡಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ ಎಂದ ಅವರು, ತುರುವೇಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಮವಸ್ತ್ರ ವಿಚಾರದಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
*ವರದಿ: ಗಿರೀಶ್ ಕೆ ಭಟ್, ತುರುವೇಕೆರೆ*