ತುರುವೇಕೆರೆ: ಎಂ.ಟಿ.ಕೃಷ್ಣಪ್ಪನವರೇ ನಿಮಗೆ ಮಾನ ಮರ್ಯಾದೆ ಇದ್ದರೆ ನಿಮ್ಮ ಬದುಕನ್ನು ಮೊದಲು ನೋಡಿಕೊಳ್ಳಿ, ಸೂಕ್ತ ದಾಖಲೆಗಳನ್ನಿಟ್ಟುಕೊಂಡು ನನ್ನ ಬಗ್ಗೆ ಮಾತನಾಡಿ, ಬಾಯಿ ಚಪಲಕ್ಕೆ ಮಾತನಾಡಬೇಡಿ. ಸುಮ್ಮನೆ ನನ್ನ ವಿರುದ್ಧ ಆರೋಪ ಮಾಡಿ ತೇಜೋವಧೆ ಮಾಡಲು ಯತ್ನಿಸಿದರೆ ನಿಮ್ಮ ಹಾಗೂ ನಿಮ್ಮ ಕುಟುಂಬದ ಜಾತಕವನ್ನು ಸಾರ್ವಜನಿಕವಾಗಿ ತೆರೆದಿಡಬೇಕಾಗುತ್ತದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಎಚ್ಚರಿಸಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಎಂ.ಟಿ.ಕೃಷ್ಣಪ್ಪನವರು ನಾಲ್ಕು ಬಾರಿ ಶಾಸಕರಾಗಿದ್ದಾರೆ, ನನ್ನ ವಿರುದ್ದ ಟೀಕೆಗಳನ್ನು ಮಾಡುವ ಮೊದಲು ಅವರ ಹಾಗೂ ಅವರ ಮಕ್ಕಳ ಬದುಕು ಏನಾಗಿದೆ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕು. ಶಾಸಕರಿಗೆ ವಯಸ್ಸಾಗಿದೆ. ಬೇರೆಯವರ ಬಗ್ಗೆ ಮಾತನಾಡುವ ಮುನ್ನ ಅವರ ಮೇಲೆ ಎಷ್ಟು ಕೇಸಿದೆ? ಅವರ ಮಕ್ಕಳ ಸಂಸ್ಕೃತಿ ಏನು? ಎಂಬುದನ್ನು ಅರಿಯಬೇಕು. ಇಂತಹ ಕೀಳುಮಟ್ಟದ ರಾಜಕಾರಣ ನನಗೆ ಬರುವುದಿಲ್ಲ. ಶಾಸಕರು ವೈಯಕ್ತಿಕವಾಗಿ ಇಲ್ಲಸಲ್ಲದ ಟೀಕೆಗಳನ್ನು ಮಾಡುವುದನ್ನು ನಿಲ್ಲಿಸಿ ಕ್ಷೇತ್ರದ ಅಭಿವೃದ್ದಿಯ ಕಡೆಗೆ ಗಮನಹರಿಸಲಿ ಎಂದು ವಾಗ್ದಾಳಿ ನಡೆಸಿದರು.
ನನ್ನ ಬಗ್ಗೆ ಕ್ಷೇತ್ರದ ಜನರು ಎಚ್ಚರದಿಂದ ಇರಬೇಕು ಎಂಬ ಶಾಸಕರ ಹೇಳಿಕೆ ಆಶ್ಚರ್ಯತಂದಿದೆ. ನಾನು ಪ್ರಾಮಾಣಿಕ ರೀತಿಯಲ್ಲಿ ಜನರ ಸೇವೆ ಮಾಡಲು ಕ್ಷೇತ್ರದ ರಾಜಕಾರಣಕ್ಕೆ ಕಾಲಿಟ್ಟಿದ್ದೇನೆ. ಅದೇ ರೀತಿ ಸೇವೆಯಲ್ಲಿ ತೊಡಗಿದ್ದೇನೆ. ಕೆಲವು ಮಾಧ್ಯಮಗಳು ನನ್ನ ತೇಜೋವಧೆ ಮಾಡುವ ಸಲುವಾಗಿ ಸುಳ್ಳು ಸುದ್ಧಿ ಪ್ರಸಾರ ಮಾಡಿದ್ದವು. ಸುದ್ದಿವಾಹಿನಿ ಹಾಗೂ ಆರೋಪ ಮಾಡಿದ ವ್ಯಕ್ತಿಗಳ ವಿರುದ್ಧ ಈಗಾಗಲೇ ಕಾನೂನು ಸಮರ ಸಾರಿದ್ದೇನೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಹೆಚ್ಚು ಮಾತನಾಡಲಾಗುವುದಿಲ್ಲ. ಆದರೆ ಸುಳ್ಳು ಆರೋಪವನ್ನೇ ಸತ್ಯವೆಂದು ಬಿಂಬಿಸಲು ಶಾಸಕರು ಮುಂದಾಗಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಗ್ಯಾರಂಟಿ ಯೋಜನೆಗಳಿಂದ ಕಂಗೆಟ್ಟಿರುವ ಶಾಸಕರು ಮುಂಬರುವ ದಿನಗಳಲ್ಲಿ ನಡೆಯುವ ತಾಪಂ, ಜಿಪಂ, ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನ ಕಾಂಗ್ರೆಸ್ ಪರ ಹೆಚ್ಚು ಒಲವು ತೋರುತ್ತಾರೋ ಎಂಬ ಭಯದಿಂದ ನನ್ನ ವಿರುದ್ಧ ಆರೋಪ ಮಾಡಲು ಪ್ರಾರಂಭಿಸಿದ್ದಾರೆ. ಶಾಸಕರು ಏನೇ ಆರೋಪ, ಅಪಪ್ರಚಾರ ಮಾಡಿದರೂ ಜನರು ನಂಬುವುದಿಲ್ಲ. ಅಭಿವೃದ್ದಿಪರವಾದ ಕಾಂಗ್ರೆಸ್ ಪಕ್ಷಕ್ಕೆ ತಾಪಂ, ಜಿಪಂನಲ್ಲಿ ಹೆಚ್ಚಿನ ಸ್ಥಾನದಲ್ಲಿ ಗೆಲುವು ದೊರಕಿಸಿಕೊಡಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ω
ಎಂ.ಟಿ.ಕೃಷ್ಣಪ್ಪನವರು ನನ್ನನ್ನು ರೌಡಿಸಂ ಹಿನ್ನೆಯುಳ್ಳವರನ್ನು ಹೊಂದಿರುವ ವ್ಯಕ್ತಿ ಎಂದು ದೂರಿದ್ದಾರೆ, ಆದರೆ ಕ್ಷೇತ್ರದಲ್ಲಿ ನಿಜವಾದ ರೌಡಿ ಯಾರು? ರೌಡಿಯ ರೀತಿ ಸಾರ್ವಜನಿಕವಾಗಿ ವರ್ತಿಸಿದವರಾರು? ಎಂಬ ಸತ್ಯದ ಅರಿವು ಕ್ಷೇತ್ರದ ಜನರಿಗಿದೆ. ಪಪಂ ಸದಸ್ಯೆಯೊಬ್ಬರನ್ನು ಸಾರ್ವಜನಿಕವಾಗಿ ನಿಂದಿಸಿ ಅಪಮಾನಗೈದು ನ್ಯಾಯಾಲಯದ ಮೆಟ್ಟಿಲು ತುಳಿದವರಾರು? ಚುನಾವಣೆ ವೇಳೆ ಚುನಾವಣಾಧಿಕಾರಿಗಳ ಮೇಲೆ ಹಲ್ಲೆ ನಡೆಸಿ ದಬ್ಬಾಳಿಕೆ ಮಾಡಿದವರಾರು? ಜೆಡಿಎಸ್ ಮುಖಂಡರು, ತಾಪಂ ಮಾಜಿ ಅಧ್ಯಕ್ಷರಾಗಿದ್ದ ಎಂ.ಡಿ.ರಮೇಶ್ ಗೌಡರವರನ್ನು ಹೊಡೆಸಲು ಹೆಡೆಮೊಟ್ಟೆ ತರಿಸಿದ್ದು ಯಾರು? ರಮೇಶ್ ಗೌಡರ ಕಟೌಟ್ ಹಾಳುಮಾಡಿದ್ದು ಯಾರು? ಎಂಬ ಸತ್ಯ ಸಂಗತಿ ಜನರಿಗೆ ಗೊತ್ತಿದೆ. ಹತ್ತಾರು ಪ್ರಕರಣಗಳಲ್ಲಿ ಕೇಸು ದಾಖಲಾಗಿರುವುದು ಶಾಸಕರ ಮೇಲೇ ಹೊರತು ನನ್ನ ಮೇಲೆ ಅಲ್ಲ. ನನ್ನ ಮೇಲೆ ಒಂದೇ ಒಂದು ಕೇಸು ಸಹ ಇಲ್ಲ ಎಂದ ಅವರು, ತಾಲ್ಲೂಕಿನಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ. ಯಾವುದೇ ಅಧಿಕಾರಿಗಳ ವರ್ಗಾವಣೆಯನ್ನೂ ನಾನು ಮಾಡಿಸಿಲ್ಲ. ಇದೆಲ್ಲಾ ಶಾಸಕರು ನನ್ನ ಮೇಲೆ ಮಾಡುತ್ತಿರುವ ಸುಳ್ಳು ಆರೋಪ ಎಂದು ಕಿಡಿಕಾರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನಕುಮಾರ್, ಕೋಳಾಲ ನಾಗರಾಜ್ ಮಾತನಾಡಿ, ಕಾಂಗ್ರೆಸ್ ಮುಖಂಡ ಬೆಮೆಲ್ ಕಾಂತರಾಜು ಅವರು ಜನಿಸುವ ಮೊದಲೇ ಅವರ ತಂದೆ ಪೆಟ್ರೋಲ್ ಬಂಕ್ ಮಾಲೀಕರಾಗಿದ್ದರು. ಆದರೆ ಶಾಸಕ ಎಂ.ಟಿ.ಕೃಷ್ಣಪ್ಪನವರು ಶಾಸಕರಾಗುವುದಕ್ಕೂ ಮುನ್ನ ಪೆಟ್ರೋಲ್ ಬಂಕ್ ನಲ್ಲಿ ಕೆಲಸದಲ್ಲಿದ್ದರು ಎಂಬುದನ್ನು ಮರೆಯಬಾರದು. ಬೆಮೆಲ್ ಕಾಂತರಾಜು ಅವರ ಬಗ್ಗೆ ಇಲ್ಲಸಲ್ಲದ ವೈಯಕ್ತಿಕ ಆರೋಪಗಳನ್ನು ಮಾಡುವುದನ್ನು ಶಾಸಕರು ನಿಲ್ಲಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಶಾಸಕರಿಗೆ ತಕ್ಕ ಉತ್ತರವನ್ನು ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನಕುಮಾರ್, ಕೋಳಾಲ ನಾಗರಾಜ್, ಮುಖಂಡರಾದ ನಂಜುಂಡಪ್ಪ, ಕೆ.ಬಿ.ಹನುಮಂತಯ್ಯ, ಲಕ್ಷ್ಮೀದೇವಮ್ಮ, ಟಿ.ಎನ್.ಶಶಿಶೇಖರ್, ಗುರುದತ್, ಹುಲಿಕಲ್ ಜಗದೀಶ್, ಗವಿರಂಗಪ್ಪ, ಮಂಜಯ್ಯ, ದಂ.ಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
*ವರದಿ: ಗಿರೀಶ್ ಕೆ ಭಟ್, ತುರುವೇಕೆರೆ*