ಪೊಲೀಸರ ಅಮಾನತ್ತಿಗೆ ಒತ್ತಾಯ/ ಸಿಒಡಿ ತನಿಖೆಗೆ ಆಗ್ರಹ/ ಎಸ್ಪಿ ಕಛೇರಿ ಎದುರು ಪ್ರತಿಭಟನೆ ಎಚ್ಚರಿಕೆ?

ತುರುವೇಕೆರೆ: ವಿಶ್ವಕರ್ಮ ಸಮಾಜದ ಯುವಕ ಕುಮಾರಾಚಾರ್ ಅವರ ಮೇಲೆ ತುರುವೇಕೆರೆ ಪೊಲೀಸರು ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆಂದು ಆರೋಪಿಸಿರುವ ಮಾಜಿ ಶಾಸಕ ಮಸಾಲಾ ಜಯರಾಮ್, ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ψ
ತಾಲ್ಲೂಕಿನ ಚಿಕ್ಕೋನಹಳ್ಳಿ ಗೇಟ್ ಬಳಿಯಿರುವ ತೋಟದ ಮನೆಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕುಮಾರ್ ಆಚಾರ್ ಅವರನ್ನು ಇಸ್ಪೀಟು ಆಡುತ್ತಿದ್ದಾರೆನ್ನುವ ಮಾಹಿತಿ ಮೇರೆಗೆ ಬಂಧಿಸಲು ಹೋಗಿದ್ದ ಪೊಲೀಸರು ಕುಮಾರ್ ಆಚಾರ್ ಮೇಲೆ ಹಲ್ಲೆ ನಡೆಸಿದ್ದು ಅದರಿಂದಲೇ ಅವರು ಮೃತಪಟ್ಟಿದ್ದಾರೆ. ಇಸ್ಪೀಟು ಆಡುತ್ತಿದ್ದಾರೆನ್ನುವ ಆರೋಪದಡಿ ನಾಲ್ವರನ್ನು ಪೋಲೀಸರು ಬಂಧಿಸಿ ಕರೆದುಕೊಂಡು ಬರುವ ವೇಳೆ ಈ ಘಟನೆ ನಡೆದಿದೆ. ಸಂಜೆ 5 ಗಂಟೆಗೆ ಕುಮಾರ್ ಆಚಾರ್ ಮೃತಪಟ್ಟಿರುವುದನ್ನು ಸ್ಥಳೀಯ ಸರ್ಕಾರಿ ವೈದ್ಯರು ದೃಢಪಡಿಸಿದರೂ ಸಹ ಮತ್ತೋರ್ವ ಆರೋಪಿ ಜಗದೀಶ್ ಎಂಬ ವ್ಯಕ್ತಿಯನ್ನು ಸಂಬಂಧಿಕ ಎಂಬ ಆಧಾರದಲ್ಲಿ ಆತನ ಬಳಿ ದೂರು ಬರೆಸಿಕೊಂಡು ಕುಮಾರ್ ಆಚಾರ್ ಅವರ ಶವವನ್ನು ತುರುವೇಕೆರೆ ಸರ್ಕಾರಿ ಆಸ್ಪತ್ರೆಯಲ್ಲೇ ಮರಣೋತ್ತರ ಪರೀಕ್ಷೆಗೆ ಒಳಪಡಿಸುವುದನ್ನು ಬಿಟ್ಟು ಶವವನ್ನು ತುಮಕೂರು ಆಸ್ಪತ್ರೆಗೆ ಕರೆದೊಯ್ದು ಮರಣವಾದ 18 ಗಂಟೆಯ ನಂತರ ಮರಣೋತ್ತರ ಪರೀಕ್ಷೆ ನಡೆಸಿರುತ್ತಾರೆ. ಇದು ಪೋಲಿಸರು ಪ್ರಕರಣವನ್ನು ಮುಚ್ಚಿಹಾಕಲು ಮಾಡಿರುವ ತಂತ್ರವಾಗಿದೆ ಎಂದು ಆರೋಪಿಸಿದರು.
ಪೊಲೀಸರ ಹಲ್ಲೆಯಿಂದ ಸತ್ತುಹೋದ ವ್ಯಕ್ತಿಯನ್ನು ಯಾವ ರೀತಿ ತುರುವೇಕೆರೆಗೆ ಕರೆತಂದರು ಎಂಬುದೇ ರಹಸ್ಯ ಸಂಗತಿಯಾಗಿದೆ. ತುರುವೇಕೆರೆ ಪಿಎಸ್ಐ ಪ್ರಕಾರ ಪ್ರಮೋದ್ ಎಂಬ ಪೊಲೀಸ್ ಪೇದೆ ಮಾಹಿತಿ ನೀಡಿದ್ದು, ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ನಂತರ ಬಂಧಿಸಿದ್ದೇವೆಂದು ಹೇಳುತ್ತಾರೆ. ಆದರೆ ಪೊಲೀಸರು ಆರೋಪಿಗಳನ್ನು ಬಂಧಿಸಿದ ಸಮಯಕ್ಕೂ, ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಸಮಯಕ್ಕೂ ತಾಳೆಯಾಗುವುದಿಲ್ಲ. ಸಬ್ ಇನ್ಸ್ಪೆಕ್ಟರ್ ಹೇಳಿದ ಪೊಲೀಸ್ ಪೇದೆ ಪ್ರಮೋದ್ ಘಟನೆ ನಡೆದ ಸ್ಥಳದಲ್ಲೇ ಇರುವುದಿಲ್ಲ, ಆಯುಧಪೂಜೆಗೆ ತುರುವೇಕೆರೆಯಲ್ಲಿ ಚಂದಾ ಎತ್ತುತ್ತಿರುತ್ತಾರೆ, ಮೊಬೈಲ್ ಟವರ್ ಲೊಕೇಷನ್ ಇಂದ ಗೊತ್ತಾಗಿದೆ. ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶದಿಂದ ಪೊಲೀಸರು ಆರೋಪಿಯಾದ ಜಗದೀಶ್ ಎಂಬಾತನನ್ನು ಹೆದರಿಸಿ ಆತನಿಂದ ದೂರು ಪಡೆದಿದ್ದಾರೆ, ಸ್ಥಳದಲ್ಲೇ ಇರದ ಪ್ರಮೋದ್ ಮಾಹಿತಿ ನೀಡಿದ ಎಂದು ಸುಳ್ಳು ಹೇಳಲಾಗುತ್ತಿದೆ ಎಂದರು.
ಈಗಾಗಲೇ ತುರುವೇಕೆರೆಯಲ್ಲಿ ಕಳೆದ 2-3 ತಿಂಗಳಿಂದ ನಾಲ್ಕೈದು ಕಳ್ಳತನ, ದರೋಡೆ ಪ್ರಕರಣಗಳು, ಎರಡು ಕೊಲೆ ಪ್ರಕರಣಗಳು ನಡೆದಿದೆ. ಈಗ ಪೊಲಿಸರು ಒಂದು ಕೊಲೆ ಮಾಡಿದ್ದಾರೆಂದು ದೂರಿದ ಅವರು, ಯಾವುದೇ ಕಳ್ಳತನ, ಕೊಲೆ ಪ್ರಕರಣಗಳನ್ನು ಭೇದಿಸುವಲ್ಲಿ ಆರೋಪಿಗಳನ್ನು ಹಿಡಿಯುವಲ್ಲಿ ಪೊಲೀಸರು ವಿಫಲವಾಗಿದ್ದಾರೆ ಎಂದು ಕಿಡಿಕಾರಿದರು.
ಅಮಾಯಕ ಯುವಕನ ಸಾವಿಗೆ ಕಾರಣರಾದ ಪೊಲೀಸರನ್ನು ಅಮಾನತ್ತುಗೊಳಿಸಬೇಕು. ಕುಟುಂಬಸ್ಥರಿಗೆ ಪರಿಹಾರದ ಜೊತೆಗೆ ಸೂಕ್ತ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಬೇಕು. ಸರ್ಕಾರ ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿ ಸೋಮವಾರ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ ಎದುರು ಕುಟುಂಬಸ್ಥರು, ಜಿಲ್ಲೆಯ ಸಂಸದರು, ಬಿಜೆಪಿ ಕಾರ್ಯಕರ್ತರೊಡಗೂಡಿ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಗೋಷ್ಟಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಪಪಂ ಸದಸ್ಯ ಚಿದಾನಂದ್, ಮುಖಂಡರಾದ ವಿ.ಬಿ.ಸುರೇಶ್, ಮೃತ ಕುಮಾರ್ ಆಚಾರ್ ಪತ್ನಿ ಮಂಜಮ್ಮ, ಮಗ ಮೋಹನ್ ಕುಮಾರ್, ಸಹೋದರಿ ಪುಷ್ಪಲತಾ, ತಂದೆ ರಂಗಾಚಾರ್, ಬಾವ ಲಿಂಗಾಚಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
*ವರದಿ: ಗಿರೀಶ್ ಕೆ ಭಟ್, ತುರುವೇಕೆರೆ*

