ಜಾತಿ ಪ್ರೀತಿ ಬಿಟ್ಟು ದೇಶದ ಅಭಿವೃದ್ದಿಗೆ ಮೈತ್ರಿ ಅಭ್ಯರ್ಥಿ ಗೆಲ್ಲಿಸಿ/ ಕುತಂತ್ರದಿಂದ ದೇವೇಗೌಡರನ್ನು ಸೋಲಿಸಿದ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಿ: ದೊಡ್ಡಾಘಟ್ಟ ಚಂದ್ರೇಶ್
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ
ತುರುವೇಕೆರೆ: ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಕುತಂತ್ರ ಮಾಡಿ ಸೋಲಿಸಿದ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿಯ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಬೇಕಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ತಿಳಿಸಿದರು.
ತಾಲೂಕಿನ ಆನೆಕೆರೆ ಗ್ರಾಮ ಪಂಚಾಯ್ತಿಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, 2019 ರ ಲೋಕಸಭಾ ಚುನಾವಣೆಯಲ್ಲಿ ತುರುವೇಕೆರೆ ಕ್ಷೇತ್ರದ ಜನತೆ ರೈತನಾಯಕರಾದ ದೇವೇಗೌಡರ ಬಗ್ಗೆ ಅಪಾರ ಪ್ರೀತಿಯನ್ನಿಟ್ಟು 20 ಸಾವಿರ ಮತಗಳ ಲೀಡ್ ಕೊಟ್ಟದ್ದನ್ನು ಮರೆಯುವಂತಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಮೈತ್ರಿ ಧರ್ಮ ಪಾಲಿಸದೆ ದೇವೇಗೌಡರನ್ನು ಸೋಲಿಸಿತು. ಇಂದು ದೇವೇಗೌಡರ ಸೋಲಿಸಿದ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವ ಅವಕಾಶ ನಮ್ಮ ಮುಂದಿದೆ. ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣನವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಮಾಜಿ ಪ್ರಧಾನಿಗಳ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಬೇಕಿದೆ ಎಂದರು.
ಕಳೆದೊಂದು ದಶಕದಿಂದ ಭಾರತ ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ, ವಿಜ್ಞಾನ, ತಂತ್ರಜ್ಞಾನದಲ್ಲಿ ಭಾರೀ ಯಶಸ್ಸನ್ನು ಸಾಧಿಸಿದ್ದು ವಿಶ್ವದ ಗಮನಸೆಳೆದಿದೆ. ಭ್ರಷ್ಟಾಚಾರ ರಹಿತ, ಅಭಿವೃದ್ದಿ ಪರ ಆಡಳಿತದಿಂದ ಜನರ ವಿಶ್ವಾಸ ಗಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ದೇಶವನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು, ಸಮರ್ಥವಾಗಿ ಮುನ್ನಡೆಸುವ ಶಕ್ತಿ ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ ಎಂಬುದನ್ನು ಅರಿತ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿಯವರು ಈ ಬಾರಿ ಎನ್.ಡಿ.ಎ ಮೈತ್ರಿಕೂಟ ಸೇರ್ಪಡೆಗೊಂಡಿದ್ದು, ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಅಪಾರ ರಾಜಕೀಯ ಅನುಭವ ಹೊಂದಿರುವ ದೇವೇಗೌಡರು ದೇಶದ ಅಭಿವೃದ್ದಿ ಕಾಂಗ್ರೆಸ್ ಪಕ್ಷದಿಂದ ಸಾಧ್ಯವಿಲ್ಲ ಎಂಬುದನ್ನು ಅರಿತು, ದೇಶದ ಜನಸಾಮಾನ್ಯರು, ರೈತರು, ಮಹಿಳೆಯರು, ಅಲ್ಪಸಂಖ್ಯಾತರು, ದೀನದಲಿತರ ಸರ್ವತೋಮುಖ ಅಭಿವೃದ್ದಿಯ ಚಿಂತನೆಯನ್ನಿಟ್ಟುಕೊಂಡು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ದೇವೇಗೌಡರ ಆಶಯದಂತೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅ|ಭ್ಯರ್ಥಿಯಾಗಿ ಕಣಕ್ಕಿಳಿದಿರುವ ವಿ.ಸೋಮಣ್ಣನವರಿಗೆ ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಮತ ದೊರಕಿಸಿಕೊಡುವ ಮೂಲಕ ಜಯಶೀಲರನ್ನಾಗಿ ಮಾಡಿ ದೇಶದ ಹಾಗೂ ಜಿಲ್ಲೆಯ ಅಭಿವೃದ್ದಿಗೆ ನಮ್ಮ ಕೊಡುಗೆಯನ್ನು ನೀಡೋಣ ಎಂದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿರುವ ಜೆಡಿಎಸ್ನ ಎಂ.ಟಿ.ಕೃಷ್ಣಪ್ಪ 67485 ಮತಗಳು, ಬಿಜೆಪಿಯ ಮಾಜಿ ಶಾಸಕರಾದ ಮಸಾಲಾ ಜಯರಾಮ್ 57636 ಮತಗಳನ್ನು ಪಡೆದಿದ್ದಾರೆ. ಈ ಎರಡೂ ಮೈತ್ರಿ ಪಕ್ಷದ ಮತಗಳನ್ನು ಒಗ್ಗೂಡಿಸಿದರೆ 125121 ಮತಗಳಾಗುತ್ತದೆ. ಕಾಂಗ್ರೆಸ್ ಪಡೆದಿರುವುದು 30293 ಮಾತ್ರ. ಈ ಮತದ ಅಂಕಿಅಂಶದ ಲೆಕ್ಕಾಚಾರದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಯಿಂದ ಅಭ್ಯರ್ಥಿಯಾಗಿರುವ ವಿ.ಸೋಮಣ್ಣನವರಿಗೆ ಕನಿಷ್ಠ ಒಂದು ಲಕ್ಷದ 20 ಸಾವಿರ ಮತಗಳನ್ನು ನಾವು ನೀಡಬೇಕಿದೆ. ಆ ಮೂಲಕ ತುರುವೇಕೆರೆ ಕ್ಷೇತ್ರದ ಜನತೆ ಜಾತಿ ಪ್ರೀತಿಯನ್ನು ಬದಿಗಿಟ್ಟು ದೇಶದ ಅಭಿವೃದ್ದಿಯ ಆಶಯದೊಂದಿಗೆ ಮೈತ್ರಿ ಅಭ್ಯರ್ಥಿಗೆ ಮತ ನೀಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ, ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಮಸಾಲಾ ಜಯರಾಮ್, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್ ಸೇರಿದಂತೆ ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.