ಸರ್ಕಾರ ಕಟ್ಟ ಕಡೆಯ ವ್ಯಕ್ತಿಯವರೆಗೂ ಯೋಜನೆ ತಲುಪಿಸಿದೆ : ರಾಜ್ಯಪಾಲ `ಥಾವರ್ ಚಂದ್ ಗೆಹ್ಲೂಟ್’
ಸರ್ಕಾರ ಕಟ್ಟ ಕಡೆಯ ವ್ಯಕ್ತಿಯವರೆಗೂ ಯೋಜನೆ ತಲುಪಿಸಿದೆ. ಗ್ಯಾರೆಂಟಿಯಿಂದ ದಿವಾಳಿ ಆಗುತ್ತದೆ ಎಂದು ಹೇಳಿದ್ದರು. ಆದರೆ ಈ ಎಲ್ಲ ಆರೋಪಗಳನ್ನು ಸರ್ಕಾರ ಸುಳ್ಳು ಎಂದು ಸಾಬೀತು ಮಾಡಿದೆ. ಜಿಎಸ್ಟಿ ಸಂಗ್ರಹದಲ್ಲೂ ರಾಜ್ಯ ಮಂಚೂಣಿಯಲ್ಲಿದೆ ಎಂದು ತಿಳಿಸಿದರು.
ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ತಮ್ಮೆಲ್ಲರಿಗೂ ನಾನು ಹಾರ್ದಿಕ ಸ್ವಾಗತವನ್ನು ಕೋರುತ್ತೇನೆ. ಕರ್ನಾಟಕ ವಿಧಾನ ಮಂಡಲದ ಮತ್ತೊಂದು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ನನಗೆ ಅತೀವ ಹರ್ಷವಾಗುತ್ತಿದೆ. ನನ್ನ ಸರ್ಕಾರ ರಾಜ್ಯದ ಅಭಿವೃದ್ಧಿಯ ವೇಗವನ್ನು ಚುರುಕುಗೊಳಿಸುವುದರಲ್ಲಿ ಮತ್ತು ಸರಕಾರದ ಹಣಕಾಸು ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೆಮ್ಮೆಯಿಂದ ತಿಳಿಸ ಬಯಸುತ್ತೇನೆ. ಮಹಾತ್ಮಾ ಗಾಂಧಿಯವರು ಹೇಳಿದಂತೆ ಆಡಳಿತವನ್ನು ಅಂತಿಮ ವ್ಯಕ್ತಿಯ ಕಣ್ಣೀರು ಒರೆಸುವ ಅವಕಾಶವೆಂಬಂತೆ ಬಳಸಿಕೊಳ್ಳಲು ನನ್ನ ಸರ್ಕಾರ ಕಟಿಬದ್ಧವಾಗಿದೆ. ಸರ್ಕಾರ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ ಕಲ್ಯಾಣ ಯೋಜನೆಗಳಿಂದಾಗಿ ರಾಜ್ಯ ಅಭಿವೃದ್ಧಿಯಲ್ಲಿ ಹಿಂದೆ ಬೀಳುತ್ತದೆ ಮತ್ತು ರಾಜ್ಯದ ಹಣಕಾಸು ವ್ಯವಸ್ಥೆ ಹದಗೆಡುತ್ತದೆ ಎಂದು ಹಲವರು ಭವಿಷ್ಯ ನುಡಿದಿದ್ದರು. ಆ ಭವಿಷ್ಯವನ್ನು ಸರಕಾರ ಸುಳ್ಳು ಮಾಡಿದೆ. ಪ್ರತಿಯೊಂದು ವಲಯದಲ್ಲೂ ರಾಜ್ಯವು ಉತ್ತಮವಾದ ಸಾಧನೆಗಳನ್ನು ದಾಖಲಿಸಿದೆ. ರಾಜ್ಯದ ಆದಾಯ ಹೆಚ್ಚುತ್ತಿದೆ. ರಾಜ್ಯಕ್ಕೆ ಖಾಸಗಿ ಬಂಡವಾಳ ದಾಖಲೆ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಕಲ್ಯಾಣ . ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನದಿಂದಾಗಿ ಅಸಮಾನತೆಯ ತೀವ್ರತೆ ಕಡಿಮೆಯಾಗುತ್ತಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಜಿಎಸ್ಟಿ ಬೆಳವಣಿಗೆ ದರ ಉತ್ತಮವಾಗಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸಮಾಜದ ಆರ್ಥಿಕ ದುರ್ಬಲ ವರ್ಗದ ಜನತೆಯಿಂದ ಸಾಲ ವಸೂಲಾತಿಯಲ್ಲಿ ಕಿರುಕುಳ, ಹಿಂಸೆ ಮತ್ತು ಒತ್ತಡದ ಹಲವಾರು ಘಟನೆಗಳು ಬೆಳಕಿಗೆ ಬಂದಿವೆ. ಕರ್ನಾಟಕ ರಾಜ್ಯದಲ್ಲಿ ಕಿರು ಸಾಲ ಮತ್ತು ಸಣ್ಣ ಸಾಲ ವಸೂಲಾತಿಯಲ್ಲಿ ಕಿರುಕುಳ, ಹಿಂಸೆ ಮತ್ತು ಒತ್ತಡ ತಡೆಯುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಗಂಭೀರ ಕ್ರಮಗಳನ್ನು ಕೈಗೊಳ್ಳಲು, ಕಿರುಕುಳ ನೀಡುವ ವ್ಯಕ್ತಿಗಳಿಗೆ ಕನಿಷ್ಠ 6 ತಿಂಗಳು ಮತ್ತು ಗರಿಷ್ಠ 10 ವರ್ಷಗಳ ವರೆಗೆ ವಿಸ್ತರಿಸಬಹುದಾದ ಶಿಕ್ಷೆ ಹಾಗೂ 5 ಲಕ್ಷ ರೂಪಾಯಿ ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸುವ ಸುಗ್ರೀವಾಜ್ಞೆಯನ್ನು ನನ್ನ ಅನುಷ್ಠಾನಗೊಳಿಸಿದೆ. ಕಿರು ಸರ್ಕಾರ ಸಾಲ ವಸೂಲಾತಿಯ ಕಿರುಕುಳವನ್ನು ತಡೆಯುವ ನಿಟ್ಟಿನಲ್ಲಿ ಶಾಸನಾತ್ಮಕವಾದ ಕ್ರಮಗಳಿಗೆ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.
ಕರ್ನಾಟಕ ಮಾದರಿ ಅಭಿವೃದ್ಧಿಯೆಂದರೆ ಜನಕೇಂದ್ರಿತ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಆಡಳಿತವನ್ನು ರೂಪಿಸುವುದು ಎಂದರ್ಥ. ಹಸಿರು ಇಂಧನ, ಮಹಿಳಾ ಸಬಲೀಕರಣ ಮುಂತಾದವುಗಳೂ ಇದರಲ್ಲಿ ಸೇರುತ್ತವೆ. ಕರ್ನಾಟಕದ ಮಾದರಿಯನ್ನು ಜಗತ್ತಿನ ಅನೇಕ ಅರ್ಥಶಾಸ್ತ್ರಜ್ಞರು ಮತ್ತು ವಿಶ್ವವಿದ್ಯಾಲಯಗಳು ಅಧ್ಯಯನ ಮಾಡುತ್ತಿವೆ. ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಹೂಮನ್ ರೈಟ್ಸ್ ಹಬ್ನ ಬ್ಲಾಗ್ನಲ್ಲಿ “ಶೈನಿಂಗ್ ಎ ಲೈಟ್ ಇನ್ ದ ಡಾರ್ಕ್ನೆಸ್” ಎಂದು ಮತ್ತು “ಎ ಬ್ಲೂ ಪ್ರಿಂಟ್ ಫಾರ್ ದ ವರ್ಲ್ಡ್” ಎಂದು ಈ ಮಾದರಿಯನ್ನು ವ್ಯಾಖ್ಯಾನಿಸಿವೆ. ಈ ಪ್ರಮೇಯದ ಕುರಿತು ತಿಳಿದುಕೊಳ್ಳಲು ವಿಶ್ವಸಂಸ್ಥೆಯ ಮುಖ್ಯಸ್ಥರೆ ರಾಜ್ಯಕ್ಕೆ ಬಂದು ನಮ್ಮ ಯೋಜನೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.