ಉಪಜಾತಿ ಕಲಂನಲ್ಲಿ ಜಾತಿ ಪಟ್ಟಿಯಲ್ಲಿರುವ ಕ್ರಮ ಸಂಖ್ಯೆ 61 ಮಾದಿಗ ಎಂದು ನಮೂದಿಸಿ : ಹರಳೂರು ಪ್ರಕಾಶ್
ತುಮಕೂರು:ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿಗೆ ಸಂಬಂಧಿಸಿದಂತೆ ಮಾದಿಗ ಸಮುದಾಯದ 3 ದಶಕಗಳ ಹೋರಾಟ ನಿರ್ಣಾಯಕ ಹಂತದಲ್ಲಿದ್ದು, ಸರಕಾರದ ಅಧಿಕಾರಿಗಳೇ ಮನೆ ಬಾಗಿಲಿಗೆ ಬಂದು ದತ್ತಾಂಶ ಸಂಗ್ರಹಕ್ಕೆ ಸಮೀಕ್ಷೆ ನಡೆಸುತಿದ್ದು, ತುಮಕೂರು ಜಿಲ್ಲೆಯ ಎಲ್ಲಾ ಮಾದಿಗ ಸಮುದಾಯದ ಜನರು ತಮ್ಮ ಜಾತಿ, ಉಪಜಾತಿ ಕಲಂನಲ್ಲಿ ಜಾತಿ ಪಟ್ಟಿಯಲ್ಲಿರುವ ಕ್ರಮ ಸಂಖ್ಯೆ 61 ಮಾದಿಗ ಎಂದು ನಮೂದಿಸುವಂತೆ ಆದಿಜಾಂಭವ ಶಕ್ತಿ ಸೇನೆ ಗ್ರಾಮೀಣಾಭಿವೃದ್ದಿ ಸಂಘದ ಕಾರ್ಯಾಧ್ಯಕ್ಷ ಹರಳೂರು ಪ್ರಕಾಶ್ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಮೇ.05 ರಿಂದ ಆರಂಭವಾಗಿರುವ ವಾಸ್ತಾವಿಕ ದತ್ತಾಂಶ ಸಂಗ್ರಹ ಸಮೀಕ್ಷೆಯ ವೇಳೆ ಮಾದಿಗಕ್ಕೆ ಸಮುದಾಯದ ಜನರು ಜಾತಿ ಸೂಚಕವಲ್ಲದೆ ಎಕೆ,ಎಡಿ,ಎಎ ಎಂದು ಬರೆಸದೆ, ಮಾದಿಗ ಎಂದು ಬರೆಸುವ ಮೂಲಕ ಇದುವರೆಗೂ ಗೊಂದಲ ಮತ್ತು ಅನ್ಯಾಯಕ್ಕೆ ತೆರೆ ಎಳೆಯಬೇಕೆಂದರು.
ಕರ್ನಾಟಕದಲ್ಲಿ ಸುಪ್ರಿಂಕೋರ್ಟಿನ ಷರತ್ತಿನಂಥೇ ವಾಸ್ತವಿಕ ದತ್ತಾಂಶ ಸಂಗ್ರಹಕ್ಕೆ ನ್ಯಾ.ನಾಗಮೋಹನ್ ದಾಸ್ ಸಮಿತಿಯವತಿಯಿಂದ ಸಮೀಕ್ಷೆ ಆರಂಭವಾಗಿದೆ.ಇದೊAದು ಸುವರ್ಣ ಅವಕಾಶ.ಈಗಾಗಲೇ ಅನ್ಯ ಜಾತಿಯ ಪುರುಷರನ್ನು ಮದುವೆಯಾಗಿರುವ ಮಾದಿಗ ಸಮುದಾಯದ ಹೆಣ್ಣು ಮಕ್ಕಳು ತಮ್ಮ ಜಾತಿ ಕಲಂನಲ್ಲಿ ಮಾದಿಗ ಎಂದು ಬರೆಸಿದರೆ, ಜೀವಿತದ ಕೊನೆಯ ವರೆಗೂ ಸರಕಾರದ ಎಲ್ಲಾ ರೀತಿಯ ಸವಲತ್ತುಗಳನ್ನು ಪಡೆಯಬಹುದು ಎಂದರು.
ಆದಿಜಾಂಭವ ಶಕ್ತಿ ಸೇನೆ ಗ್ರಾಮೀಣಾಭಿವೃದ್ದಿ ಸಂಘದ ಅಧ್ಯಕ್ಷರಾದ ಕೇಶವಮೂರ್ತಿ ಮಾತನಾಡಿ,ಮೂರು ಹಂತಗಳಲ್ಲಿ ನಡೆಯುವ ಜಾತಿ ಗಣತಿ ದತ್ತಾಂಶ ಸಮೀಕ್ಷೆಯಲ್ಲಿ ಮಾದಿಗ ಸಮುದಾಯದ ಜನರು ತಮ್ಮ ಜಾತಿ ಮತ್ತು ಉಪಜಾತಿ ಕಲಂನಲ್ಲಿ ಮಾದಿಗ ಎಂದು ಬರೆಸಬೇಕು. ಯಾರು ಸಹ ಸಮೀಕ್ಷೆಯಿಂದ ಹೊರಗೆ ಉಳಿಯದಂತೆ ಆಯಾಯ ಗ್ರಾಮದಲ್ಲಿರುವ ಯುವಜನರು ಕೆಲಸ ಮಾಡಬೇಕು. ರಾಜಕೀಯ, ಅರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ದಿಗೆ ಈ ಸಮೀಕ್ಷೆ ಮಹತ್ವದ್ದು, ಹಾಗಾಗಿ ಯಾರು ನಿರ್ಲಕ್ಷ ಮಾಡಬಾರದೆಂದು ಮನವಿ ಮಾಡಿದರು.
ಆದಿ ಜಾಂಭವ ಶಕ್ತಿ ಸೇನೆ ಗ್ರಾಮೀಣಾಭಿವೃದ್ದಿ ಸಂಘದ ಕಾರ್ಯದರ್ಸಿ ನಾಗೇಶ್ .ಹೆಚ್.ಎನ್. ಮಾತನಾಡಿ, ಕರ್ನಾಟಕದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಗಳಿವೆ.ಅವುಗಳಲ್ಲಿ ಮಾದಿಗ ಜಾತಿ 61 ನೇಯ್ದು, ಮಾದಿಗರು ತಮ್ಮ ಜಾತಿ ಮತ್ತು ಉಪಜಾತಿ ನಮೂದಿಸುವ ಸಂದರ್ಭದಲ್ಲಿ ಅತ್ಯಂತ ಎಚ್ಚರಿಕೆಯಿಂದ ಮಾದಿಗ ಎಂದು ನಮೂದಿಸಬೇಕು.ಜಾತಿ ಸೂಚಕವಲ್ಲದ ಯಾವ ಪದಗಳನ್ನು ಬಳಸಬಾರದು ಎಂಬುದು ನಮ್ಮ ಮನವಿಯಾಗಿದೆ. ಜನರು ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಸರಿಯಾದ ದತ್ತಾಂಶ ದೊರೆಯಲು ಸಹಕಾರ ನೀಡಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಆದಿ ಜಾಂಭವ ಶಕ್ತಿ ಸೇನೆ ಗ್ರಾಮೀಣಾಭಿವೃದ್ದಿ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಹೆಚ್.ಮಂಜುನಾಥ್,ಸಹ ಖಜಾಂಚಿ ನಾಗರಾಜು, ಸಹಕಾರ್ಯದರ್ಶಿ ಪ್ರದೀಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.