ದೇಶದ ಭದ್ರತೆಯ ವಿಷಯದಲ್ಲಿ ಕೈಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ : ಎಂ.ಟಿ.ಕೃಷ್ಣಪ್ಪ
ತುರುವೇಕೆರೆ: ವಿಶ್ವಕ್ಕೆ ಶಾಂತಿಯ ಸಂದೇಶವನ್ನು ನೀಡಿ ಸೌಹಾರ್ದತೆ, ಸಾಮರಸ್ಯವನ್ನು ಬಯಸುವ ರಾಷ್ಟ್ರ ನಮ್ಮದಾಗಿದೆ. ಆಕ್ರಮಣಶೀಲತೆ, ಯುದ್ದ ನಮ್ಮ ದೇಶದ ನಿಲುವಲ್ಲ, ದೇಶದ ಭದ್ರತೆಯ ವಿಷಯದಲ್ಲಿ ಕೈಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ ಹಾಗೂ ಶತ್ರು ರಾಷ್ಟ್ರಕ್ಕೆ ತಕ್ಕ ಪಾಠವನ್ನು ಕಲಿಸುವಲ್ಲಿ ನಾವು ಹಿಂಜರಿಯುವುದಿಲ್ಲ ಎಂದು ಶಾಸಕ ಎಂ.ಟಿ. ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಕೆ.ಹಿರಣ್ಣಯ್ಯ ಬಯಲು ರಂಗಮಂದಿರದಲ್ಲಿ ತಾಲ್ಲೂಕು ಆಡಳಿತ ಆಯೋಜಿಸಿದ್ದ 79 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಾನಂತರ ದೇಶ ಎಲ್ಲಾ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ್ದು, ಅಭಿವೃದ್ದಿಯಲ್ಲಿ ವೇಗವಾಗಿ ಮುನ್ನಡೆಯುತ್ತಿದೆ. ಆರ್ಥಿಕವಾಗಿ ವಿಶ್ವಕ್ಕೇ ಮೂರನೇ ಸ್ಥಾನದಲ್ಲಿ ಭಾರತ ದೇಶವಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಕಾಶ್ಮೀರ ಹತ್ಯಾಕಾಂಡದ ವಿರುದ್ಧ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ಶತ್ರುರಾಷ್ಟ್ರ ಪಾಕಿಸ್ತಾನವನ್ನು ಸದೆಬಡಿದ ಹೆಮ್ಮೆಯ ವೀರಯೋಧರನ್ನು ನಾವು ಸ್ಮರಿಸಬೇಕಿದೆ. ಆಪರೇಷನ್ ಸಿಂಧೂರದ ಮೂಲಕ ದೇಶದ ರಕ್ಷಣೆಗೆ ದಿಟ್ಟ ನಿಲುವನ್ನು ಕೈಗೊಂಡ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು.
ತಹಸೀಲ್ದಾರ್ ಕುಂಞ ಅಹಮದ್ ಧ್ವಜಾರೋಹಣ ನೆರವೇರಿಸಿ ಧ್ವಜಸಂದೇಶ ನುಡಿದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ರಾಷ್ಟ್ರಧ್ವಜವನ್ನು ಹಿಡಿದು ಪಥಸಂಚಲನ ನಡೆಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಬಿಇಒ ಸೋಮಶೇಖರ್, ಇಒ ಶಿವರಾಜಯ್ಯ, ಪಪಂ ಉಪಾಧ್ಯಕ್ಷೆ ಭಾಗ್ಯ, ಸದಸ್ಯರಾದ ಸುರೇಶ್, ಮಧು, ಚಿದಾನಂದ್, ಜಯಮ್ಮ, ಶೀಲಾ, ಆಶಾ, ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಸಿಪಿಐ ಲೋಹಿತ್, ಪಿಎಸ್ಐ ಮೂರ್ತಿ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಾಗರೀಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ