
ಪಾವಗಡ ಸೆ 21 : ತಾಲೂಕಿನಧ್ಯಂತ ಶುದ್ದ ಕುಡಿವ ನೀರಿನ ಅಭಾವ ಸೃಷ್ಟಿಯಾಗಿದ್ದು ಶೀಘ್ರ ಕಾಮಗಾರಿ ಪೂರ್ಣಗೊಳಿಸಿ,ಪಾವಗಡ ತಾಲೂಕಿಗೆ ತುಂಗಭದ್ರಾ ಹಿನ್ನಿರು ಯೋಜನೆಯ ಶುದ್ದ ಕುಡಿವ ನೀರು ಪೂರೈಕೆ ಮಾಡುವಂತೆ ಇಲ್ಲಿನ ರಾಷ್ಟ್ರೀಯ ಕಿಸಾನ್ ರೈತ ಸಂಘದ ರಾಜ್ಯಾಧ್ಯಕ್ಷ ಪಾವಗಡದ ವಿ.ನಾಗಭೂಷಣರೆಡ್ಡಿ ಸಿಎಂ ಸಿದ್ದರಾಮಯ್ಯ ನೀರಾವರಿ ಸಚಿವ ಹಾಗೂ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗಾರರ ಜತೆಯಲ್ಲಿ ಮಾತನಾಡಿದ ರೆಡ್ಡಿ,ತಾಲೂಕಿನಲ್ಲಿ ತೀವೃ ಕುಡಿವ ನೀರಿನ ಸಮಸ್ಯೆ ಎದುರಾಗಿದ್ದ ಹಿನ್ನಲೆಯಲ್ಲಿ ಕಳೆದ ನಾಲೈದು ವರ್ಷಗಳ ಹಿಂದೆ ಇಲ್ಲಿನ ಆನೇಕ ಪ್ರಗತಿಪರ ಸಂಘಸಂಸ್ಥೆಗಳ ಸತತ ಹೋರಾಟ ಮತ್ತು ನ್ಯಾಯಾಲಯದ ಮೊರೆ ಹೋದ ಕಾರಣ ಇಲ್ಲಿನ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಆಂದಿನ ಸಿಎಂ ಸಿದ್ದರಾಮಯ್ಯ ಬಯಲು ಸೀಮೆ ಪ್ರದೇಶಗಳಿಗೆ ಬಹುಗ್ರಾಮ ಶುದ್ದ ಕುಡಿವ ನೀರು ಕಲ್ಪಿಸಲು ಆಸಕ್ತಿವಹಿಸಿ ಯೋಜನೆಯ ಕಾಮಗಾರಿಯ ಅಂದಾಜುವೆಚ್ಚದಂತೆ 3,252ಕೋಟಿ ಅನುದಾನ ಕಲ್ಪಿಸಿದ್ದರು.ಪಾವಗಡ ತಾಲೂಕಿಗೆ ತುಂಗಭದ್ರಾ ಜಲಾಶಯದಿಂದ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕಾಮಗಾರಿಯು ಟೆಂಡರ್ ಕರಾರಿನಂತೆ ಸಂಖ್ಯೆ,03/2018-19 ದಿನಾಂಕ :13/12/2018 ರಂದು ಆಂಧ್ರ ಪ್ರದೇಶ ಹೈದರಾಬಾದ್ ಮೂಲದ ಮೆಗಾ ಎಂಜಿನಿಯರಿಂಗ್ ಮತ್ತು ಇನ್ಪ್ರೋಟ್ರಚರ್ಸ್ ಲಿ.ಕಂಪನಿಗೆ ಕಾಮಗಾರಿ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಡಲಾಗಿತ್ತು.ಅದರಂತೆ ಮೆಗಾ ಕಂಪನಿಯ ಗುತ್ತಿಗೆದಾರರು ನಿಯಮನುಸಾರ ಪ್ರಾರಂಭಿಸಿದ್ದು ಕಾಮಗಾರಿ ಪ್ರಗತಿಯಲ್ಲಿದೆ.ಸದರಿ ಕಾಮಗಾರಿಯ 2,352 ಕೋಟಿ ರುಗಳಿಗೆ ರಾಜ್ಯ ಸರ್ಕಾರ ಮಂಜೂರಾತಿ ಕಲ್ಪಿಸಿದೆ.ಸದರಿ ಕಾಮಗಾರಿಯ ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಯೋಜನೆಯಡಿ ಪಾವಗಡ ತಾಲ್ಲೂಕಿನ ಪಾವಗಡ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು,ಚಳ್ಳಕೆರೆ,ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಉಜ್ಜನಿ ಹಾಗೂ ಇತರೆ ಪಟ್ಟಣ ಮತ್ತು 216 ಜನ ವಸತಿಗಳು ಹಾಗೂ ಹೊಸಪೇಟೆ ತಾಲೂಕಿನ ಚಿಲಕನಹಟ್ಟಿ ಮತ್ತು 14 ಜನವಸತಿಗಳು ಕುಡಿಯುವ ನೀರಿನ ಸರಬರಾಜು ಹಾಗೂ ಹೆಚ್ಚುವರಿಯಾಗಿ ಸೇರ್ಪಡೆಯಾಗಲಿರುವ ಚಿತ್ರದುರ್ಗ ಜಿಲ್ಲೆಯ ತರುವನೂರು ಹೋಬಳಿಯ 59 ಜನ ವಸತಿಗಳಿಗೆ ಕುಡಿಯುವ ನೀರಿನ ಸರಬರಾಜು ಯೋಜನೆಯ ಮಂಜೂರಾಗಿದೆ. ತುಂಗಭದ್ರಾ ಡ್ಯಾಮ್ ನಲ್ಲಿ ಜಾಕ್ ವೆಲ್ ನಿರ್ಮಿಸುವ ವೇಳೆ,ತುಂಗಭದ್ರಾ ಅಣೆಕಟ್ಟು ಪ್ರಾಧಿಕಾರದಿಂದ 2019-20 ಕಾಮಗಾರಿಯ ಅನುಮೋದನೆ ನಿರಾಕರಿಸಿದ್ದ ಪರಿಣಾಮ ಸದರಿ ಅಣೆಕಟ್ಟೆಯ ನೀರು ಸಂಗ್ರಹಣಾ ಜಾಗದಲ್ಲಿ ಜಾಕ್ ವೆಲ್ ಮತ್ತು ಕನೆಕ್ಟಿಂಗ್ ಪೈಪ್ ಲೈನ್ ಗಳನ್ನು ಅಳವಡಿಸಲು ವಿಳಂಬ ಮತ್ತು ಅಡಚಣೆ ಎದುರಾಗಿತ್ತು.ಬಳಿಕ ತುಂಗಭದ್ರಾ ನದಿ ಪ್ರಾಧಿಕಾರದಿಂದ ಅನುಮೋದನೆ ಸಿಕ್ಕಿದ್ದು ಈಗ ಜಾಕ್ ವೆಲ್ ಕಾಮಗಾರಿ ಪ್ರಗತಿಯಲ್ಲಿದೆ.
ಆದರೆ 2020-21 ನೇ ಸಾಲಿಗೆ ಬಿದ್ದ ಮಳೆಯಿಂದ ತುಂಗಭದ್ರಾ ಡ್ಯಾಮ್ಗೆ ಹೆಚ್ಚು ನೀರು ಸಂಗ್ರಹವಾಗಿದ್ದು ಒಳ ಹರಿವಿನ ನೀರು ಹೆಚ್ಚು ಹರಿದುಬರುತ್ತಿದ್ದ ಕಾರಣ ಆ ಸಮಯದಲ್ಲಿ ಡ್ಯಾಮ್ ನ ಒಳಭಾಗದಲ್ಲಿ ಜಾಕ್ ವೆಲ್ ಕಾಮಗಾರಿ ನಿರ್ವಹಿಸಲು ಕಷ್ಟಸಾಧ್ಯವಾಗಿ ಕಾಮಗಾರಿ ವಿಳಂಬವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.2022- 23 ರಲ್ಲಿ ಯುದ್ಧೋಪಾದಿಯಲ್ಲಿ ಕಾಮಗಾರಿ ನಿರ್ವಹಣೆ ಕೈಗೊಂಡಿದ್ದು ಈ ಸಂಬಂಧ ಸಿವಿಲ್ ಕಾಮಗಾರಿ ಪೂರ್ಣಗೊಂಡಿರುವುದಾಗಿ ತಿಳಿಸಿದ್ದು ಜಾಕ್ ವೆಲ್ ಪ್ರದೇಶಕ್ಕೆ ಎಂಬ್ಯಾಕ್ ಮೆಂಟ್ ರಸ್ತೆಯನ್ನು ಮಾಡಿ ಅದರ ಮೇಲೆ 1200 ಎಂಎಂ ವ್ಯಾಸದ ಎರಡು ಏರು ಕೊಳವೆ ಮಾರ್ಗ ನಿರ್ಮಿಸಲಾಗಿದೆ.ಈ ಸಂಬಂಧ ಪಾವಗಡ ತಾ,ಸೇರಿದಂತೆ ತುಮಕೂರು ಜಿಲ್ಲೆ,ಚಳ್ಳಕೆರೆ ಮೊಳಕಾಲ್ಮೂರು,ಚಿತ್ರದುರ್ಗ ಜಿಲ್ಲೆಯ ಕೂಡ್ಲಗಿ ಬಳ್ಳಾರಿಯ ಚಿಲಕನಹಟ್ಟಿ ವಿಜಯನಗರ ಜಿಲ್ಲೆಗಳ ರಾಷ್ಟ್ರೀಯ ಅರಣ್ಯ ಪ್ರದೇಶದಲ್ಲಿ ಬರುವ ಕಾಮಗಾರಿಗೆ ಅನುಮೋದನೆ ಕಲ್ಪಿಸಲಾಗಿದೆ.ಪಾವಗಡ ತಾಲೂಕಿಗೆ ಸಂಬಂಧಿಸಿದ ಬೆಳ್ಳಿಬಟ್ಲು ಹತ್ತಿರ ಎಂಬಿಆರ್-2 ಹಾಗೂ ಜಡ್ಪಿಆರ್ -2 ಹಾಗೂ ರಾಷ್ಟ್ರೀಯ ಅರಣ್ಯ ಇಲಾಖೆಯಿಂದ ನಿಡಗಲ್ ಅರಣ್ಯ ಪ್ರದೇಶದಲ್ಲಿಯೂ ಬೃಹತ್ ಟ್ಯಾಂಕ್ ನಿರ್ಮಾಣಕ್ಕೆ ಅನುಮೋದನೆ ಕಲ್ಪಿಸಲಾಗಿದೆ.ಇಲ್ಲಿನ ಯೋಜನೆಯ ನೀರು ಸಂಹ್ರಕ್ಕೆ 200ಲಕ್ಷ ಲೀಟರ್ ಸಾಮರ್ಥ್ಯದ 17 ಬೃಹತ್ ಟ್ಯಾಂಕ್ಗಳ ನಿರ್ಮಾಣ ಕಾಮಗಾರಿ ಮತ್ತು ಟ್ಯಾಂಕ್ಗಳ ಪೈಪ್ ಲೈನ್ ಕನೆಕ್ಟಿಂಗ್ ಕಾಮಗಾರಿ ಸಹ ಮುಕ್ತಾಯ ಹಂತದಲ್ಲಿದೆ.ಈಗಾಗಲೇ ತಾಲೂಕಿನಲ್ಲಿ 672 ಕಿಮೀ ಪೈಕಿ 669 ಕಿ.ಮೀ ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡಿದ್ದು 179 ಓಎಚ್.ಟಿಗಳ ಕಾಮಗಾರಿ ಪೂರ್ಣಗೊಳಿಸಲಾಗಿದೆ.5 ಜೆಡ್ಬಿಟಿ ಮತ್ತು 9ರ ಪೈಕಿ 5ಜಡ್ಬಿಆರ್ ಕಾಮಗಾರಿ ಪೂರ್ಣಗೊಂಡಿದೆ.2ಐಪಿಎಸ್ನ ಸಿವಿಲ್ ಕಾಮಗಾರಿ ಮತ್ತು ವಿದ್ಯುತ್ ಹಾಗೂ ಪಂಪು ಮೋಟಾರ್ ಮತ್ತು ಟಿಸಿ ಅಳವಡಿಸುವ ಕಾಮಗಾರಿ ಹಂತಿಮ ಹಂತದಲ್ಲಿದೆ.ತಾಲೂಕಿಗೆ ಸಂಬಂಧಿಸಿದಂತೆ ತುಂಗಭದ್ರಾ ಶುದ್ಧ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಶೇ.98% ರಷ್ಟು ಪೂರ್ಣಗೊಂಡಿರುವ ಮಾಹಿತಿ ತಿಳಿಸಿದ್ದು ಈ ಯೋಜನೆಯ ಇದೇ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಪ್ರಯೋಗಿಕವಾಗಿ ಜಾಕ್ ವೆಲ್ ನಿಂದ ತುಂಗಭದ್ರಾ ಯೋಜನೆಯ ನೀರನ್ನು ಹರಿಸಲಿದ್ದು ಪ್ರಸಕ್ತ ಸಾಲಿನ ಡಿ,30ರೊಳಗೆ ಪಾವಗಡ ತಾಲೂಕಿಗೆ ತುಂಗಭದ್ರಾ ಯೋಜನೆಯ ನೀರು ಪೂರೈಕೆ ಮಾಡುವುದಾಗಿ ಇಲ್ಲಿನ ಜಿಪಂ ಗ್ರಾಮೀಣ ಕುಡಿವ ನೀರು & ನೈರ್ಮಲ್ಯ ಉಪವಿಭಾಗದ ಸಹಾಯಕ ಅಭಿಯಂತರ ಮತ್ತು ಸಹಾಯಕ ಎಂಜಿನಿಯರ್ ಬಸವಲಿಂಗಪ್ಪ ತಿಳಿಸಿರುವುದಾಗಿ ಅವರು ತಿಳಿಸಿದ್ದು ಪ್ರಸಕ್ತ ಸಾಲಿನ ಡಿಸೆಂಬರ್ ಅಂತ್ಯಕ್ಕಾದರೂ ತುಂಗಭದ್ರಾ ಜಲಾಶಯದ ಶುದ್ಧ ಕುಡಿವ ನೀರು ಪಾವಗಡ ತಾಲೂಕಿಗೆ ಪೂರೈಕೆ ಮಾಡಬೇಕು.ಇಲ್ಲಾವಾದರೆ ನೀರಿಗೆ ತೀವೃ ಸಮಸ್ಯೆ ಆಗಲಿರುವುದಾಗಿ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಹಾಗೂ ನೀರಾವರಿ ಇಲಾಖೆ,ಜಿಲ್ಲಾ ಉಸ್ತುವಾರಿ ಸಚಿವ,ಸ್ಥಳೀಯ ಶಾಸಕ ವೆಂಕಟೇಶ್ ಮತ್ತು ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವುದಾಗಿ ಹೇಳಿದರು.
ಸುದ್ದಿ : ನಾಗೇಂದ್ರ , ಪಾವಗಡ.