ಮೇವು ಮತ್ತು ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಿ : ಅಧಿಕಾರಿಗಳಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಸೂಚನೆ
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ
ತುರುವೇಕೆರೆ: ಮುಂಬರುವ ಬೇಸಿಗೆಯಲ್ಲಿ ತಾಲ್ಲೂಕಿನ ಯಾವುದೇ ಗ್ರಾಮಗಳ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಅಧಿಕಾರಿಗಳು ಈಗಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕುಡಿಯುವ ನೀರಿನ ಲಭ್ಯತೆ ಹಾಗೂ ಜಾನುವಾರುಗಳ ಮೇವಿನ ಲಭ್ಯತೆ ಕುರಿತಂತೆ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಪಿಡಿಒಗಳೊಂದಿಗೆ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಸಿದ ಅವರು, ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗಬಹುದಾದ ಗ್ರಾಮಗಳನ್ನು ಗುರುತಿಸಿ ಪಟ್ಟಿ ಮಾಡಿ ನೀರಿನ ಕೊರತೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದರು.
ಬೇಸಿಗೆಯಲ್ಲಿ ಜನರಿಗೆ ಮಾತ್ರವಲ್ಲದೆ ಜಾನುವಾರುಗಳಿಗೆ ಮೇವು, ಕುಡಿಯುವ ನೀರಿನ ಲಭ್ಯತೆ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕು. ಬಿಸಿಲಿನ ಝಳ ಹೆಚ್ಚಿರುವುದರಿಂದ ನೀರಿನ ಅಗತ್ಯತೆಯೂ ಅಷ್ಟೇ ಹೆಚ್ಚಿರುತ್ತದೆ. ಯಾವುದೇ ಗ್ರಾಮದಿಂದಲೂ ನೀರಿನ ಕೊರತೆ ಎಂಬ ದೂರು ಬಾರದಂತೆ ಅಧಿಕಾರಿಗಳು, ಪಂ ಚಾಯ್ತಿ ವ್ಯಾಪ್ತಿಯಲ್ಲಿ ಪಿಡಿಒಗಳು ಕ್ರಮ ವಹಿಸಬೇಕೆಂದರು. ಗ್ರಾಮೀಣ ರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಯಿಂದ ಕುಡಿಯುವ ನೀರಿನ ಲಭ್ಯತೆ, ಕಾರ್ಯನಿರ್ವಹಿಸುತ್ತಿರುವ ಬೋರ್ ವೆಲ್ಗಳ ಮಾಹಿತಿ ಪಡೆದ ಶಾಸಕರು, ಹೆಚ್ಚುವರಿಯಾಗಿ ನೀರಿನ ಅಭಾವವಿರುವ ಕಡೆ ಹೊಸದಾಗಿ ಬೋರ್ವೆಲ್ ಕೊರೆಯುವಂತೆ ಹಾಗೂ ಕೆಟ್ಟು ಹೋಗಿರುವ ಬೋರ್ಗಳನ್ನು ಸರಿಪಡಿಸುವಂತೆ ಸೂಚಿಸಿದರು.
ಬೆಸ್ಕಾಂನವರಿಗೆ ಕೃಷಿ ಚಟುವಟಿಕೆಗೆ ನೀರಿನ ಜೊತೆ ವಿದ್ಯುತ್ ಸಹ ಅಗತ್ಯವಿರುವುದರಿಂದ ಹೆಚ್ಚಿನ ಲೋಡ್ ಶೆಡ್ಡಿಂಗ್ ಮಾಡದಂತೆ ಆದೇಶಿಸಿದರು. ಪಶು ಸಂಗೋಪನಾ ಇಲಾಖೆಯಿಂದ ಮೇವಿನ ಲಭ್ಯತೆ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಕ್ರಮವಹಿಸುವಂತೆ ಸೂಚಿಸಿದರು.
ತುರುವೇಕೆರೆ ಪಟ್ಟಣಕ್ಕೆ ಸಂಬಂಧಿಸಿದಂತೆ 38 ಬೋರ್ಗಳು ಕಾರ್ಯನಿರ್ವಹಿಸುತ್ತಿದ್ದು ಪ್ರತಿದಿನ ನೀರು ಸರಬರಾಜು ಮಾಡಲಾಗುತ್ತಿದೆ, ಪ್ರತಿ ಮೂರು ದಿನಕ್ಕೆ ಮಲ್ಲಾ ಘಟ್ಟ ಕೆರೆ ಮೂಲಕ ಪ್ರತಿ ವಾರ್ಡ್ಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಮುಖ್ಯಾಧಿಕಾರಿ ಶ್ರೀನಾಥ್ ಬಾಬು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಯಿಸಿದ ಶಾಸಕರು, ಪ್ರತಿ ಎರಡು ದಿನಕ್ಕೊಮ್ಮ ನೀರು ಬಿಡುವ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಪಟ್ಟಣ ಹಾಗೂ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿದ್ದರೆ ಕೂಡಲೇ ಸರಿಪಡಿಸಿ, ಜನರಿಗೆ ಶುದ್ಧ ಕುಡಿಯುವ ನೀರಿನ ಸೌಕರ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ತಹಸೀಲ್ದಾರ್ ಕುಂಞ ಅಹಮದ್ ಮಾತನಾಡಿ, ಗ್ರಾಪಂ ಪಿಡಿಒಗಳು ತಮ್ಮ ವ್ಯಾಪ್ತಿಯ ಪ್ರತಿ ಗ್ರಾಮದಲ್ಲಿನ ಕುಡಿಯುವ ನೀರಿನ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದು ಸಮಸ್ಯೆಯಿದ್ದರೆ ಕೂಡಲೇ ಪರಿಹರಿಸಬೇಕೆಂದರು. ಇಒ ಶಿವರಾಜಯ್ಯ ಸೇರಿದಂತೆ ತಾಲೂಕಿನ ಎಲ್ಲಾ ಇಲಾಖೆಯ ಮುಖ್ಯಸ್ಥರು, ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.