ವಿಶೇಷ ವರದಿ: ಗಿರೀಶ್ ಕೆ ಭಟ್, ತುರುವೇಕೆರೆ
ಆಡಳಿತ ಮಂಡಳಿಯಿಲ್ಲ, ಅಧಿಕಾರಿಗಳ ದರ್ಬಾರ್ ಲಂಚದ ಹಾವಳಿ ನಾಗರೀಕರ ಕೆಲಸ ವಿಳಂಬ
ಮರೀಚಿಕೆಯಾದ ಪಟ್ಟಣದ ಅಭಿವೃದ್ದಿ ಆದಾಯವಿಲ್ಲದೆ ನಿಂತಿರುವ ಕಟ್ಟಡಗಳು ತೆರಿಗೆ ಹಣ ಪೋಲು
ತುರುವೇಕೆರೆ: ಆಡಳಿತ ಮಂಡಳಿಯಿಲ್ಲದೆ ಪಟ್ಟಣ ಪಂಚಾಯ್ತಿ ನಾವಿಕನಿಲ್ಲದ ದೋಣಿಯಂತಾಗಿದೆ. ಸರ್ಕಾರ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ಘೋಷಣೆ ಮಾಡದೆ ಕೇವಲ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲೇ ಕಾಲಕಳೆಯುತ್ತಿದ್ದು ಸ್ಥಳೀಯ ಆಡಳಿತದ ಮೇಲೆ ದೊಡ್ಡ ಪರಿಣಾಮ ಉಂಟಾಗಿದೆ. ಸ್ಥಳೀಯ ಪಟ್ಟಣ ಪಂಚಾಯ್ತಿಯಲ್ಲಿ ೧೪ ಸದಸ್ಯರ ಬಲವಿದ್ದರೂ ಪಟ್ಟಣದ ಅಭಿವೃದ್ದಿಯ ವಿಚಾರದಲ್ಲಿ ಆಡಳಿತ ಮಂಡಳಿ ಇಲ್ಲದಿರುವುದರಿಂದ ಯಾವುದೇ ಒಮ್ಮತದ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.
ಇದರಿಂದ ಪಪಂನಲ್ಲಿ ಅಧಿಕಾರಿಗಳದ್ದೇ ದರ್ಬಾರ್ ಆಗಿದ್ದು, ಪಪಂನಲ್ಲಾಗಬೇಕಾದ ನಾಗರೀಕರ ಕೆಲಸಕಾರ್ಯಗಳು ವಿಳಂಬವಾಗುತ್ತಿದೆ. ಪಪಂಯ ಸದ್ಯದ ಪರಿಸ್ಥಿತಿ ಹೇಗಿದೆ ಅಂದರೆ ಹೇಳೋರು ಕೇಳೋರು ಯಾರೂ ಇಲ್ಲದ ಸ್ಥಿತಿಯಾಗಿದೆ.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ತಾಲ್ಲೂಕಿನಲ್ಲೂ ಬಿಜೆಪಿಯ ಮಸಾಲಾ ಜಯರಾಮ್ ಶಾಸಕರಾಗಿದ್ದರು. ಅವರ ಕಾರ್ಯಭಾರದ ಅವಧಿಯಲ್ಲೇ ನಡೆದ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿಯ ಸದಸ್ಯರು ಅತ್ಯಧಿಕ ಸಂಖ್ಯೆಯಲ್ಲಿ ಗೆದ್ದು ಪಪಂ ಅಧಿಕಾರದ ಚುಕ್ಕಾಣಿ ಸಹ ಹಿಡಿದಿದ್ದರು.
ಈಗ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದು ಎಂ.ಟಿ.ಕೃಷ್ಣಪ್ಪ ಶಾಸಕರಾಗಿದ್ದಾರೆ. ಪಟ್ಟಣ ಪಂಚಾಯ್ತಿಯ ಮೊದಲ ಎರಡೂವರೆ ವರ್ಷದ ಅವಧಿ ಮುಗಿದು ೪-೫ ತಿಂಗಳಾಗಿದೆ. ಹೊಸ ಸರ್ಕಾರ ಮುಂದಿನ ೬೦ ತಿಂಗಳ ಅವಧಿಗೆ ಮೀಸಲು ಹೊರಡಿಸಬೇಕಿದೆ. ಆದರೆ ಸರ್ಕಾರ ಮೀಸಲು ಹೊರಡಿಸಲು ವಿಳಂಬ ಧೋರಣೆ ಅನುಸರಿಸುತ್ತಿದೆ. ಇದರಿಂದ ಪಟ್ಟಣ ಪಂಚಾಯ್ತಿ ಆಡಳಿತ ಹದಗೆಟ್ಟು ಹೋಗಿದೆ.
ಕೋಟ್ಯಾಂತರ ರೂ ಖರ್ಚು ಮಾಡಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣ ಉದ್ಘಾಟನೆಯಾದರೂ ಜನರ ಅನುಕೂಲಕ್ಕೆ ಲಭ್ಯವಾಗಿಲ್ಲ. ಸಂತೆ ಮೈದಾನದಲ್ಲಿ ದಶಕಗಳ ಹಿಂದೆ ನಿರ್ಮಿಸಿರುವ ಮೀನು, ಮಾಂಸದ ಮಾರುಕಟ್ಟೆಯಿಂದ ಒಂದು ರೂಪಾಯಿ ಆದಾಯ ಪಪಂಗೆ ಬಂದಿಲ್ಲ. ಮತ್ತೆ ಕಳೆದ ಕೆಲವು ತಿಂಗಳ ಹಿಂದೆ ಇದೇ ಸಂತೆ ಮೈದಾನದಲ್ಲಿ ಬೀದಿಬದಿ ವ್ಯಾಪಾರಿಗಳಿಗಾಗಿ ನಿರ್ಮಿಸಲಾದ ವೆಂಡರ್ ಜೋನ್ ಸಹ ಉಪಯೋಗಕ್ಕೆ ಬಾರದಾಗಿದೆ. ಪಟ್ಟಣದ ವಾರ್ಡ್ಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಪ್ರಮುಖ ರಸ್ತೆಗಳಾದ ದಬ್ಬೇಘಟ್ಟ ರಸ್ತೆ, ಮಾಯಸಂದ್ರ ರಸ್ತೆ, ಬಾಣಸಂದ್ರ ರಸ್ತೆ, ತಿಪಟೂರು ರಸ್ತೆಗಳಲ್ಲಿರುವ ಅಂಗಡಿಗಳವರು ಪಾದಚಾರಿ ಮಾರ್ಗದಲ್ಲೂ ತಮ್ಮ ಅಂಗಡಿಯನ್ನು ವಿಸ್ತರಿಸಿಕೊಂಡಿದ್ದು, ನಾಮಫಲಕ, ಅಂಗಡಿಯ ಸಾಮಾನುಗಳನ್ನು ಹರಡಿಕೊಂಡಿದ್ದಾರೆ. ಪಾದಚಾರಿಗಳಿಗೆ ಓಡಾಡಲು ವ್ಯವಸ್ಥಿತ ಮಾರ್ಗವೇ ಇಲ್ಲದಂತಾಗಿದೆ. ಪಾದಚಾರಿ ಮಾರ್ಗ ಒತ್ತುವರಿಯಾಗಿದ್ದರೂ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಕಂಡೂಕಾಣದಂತೆ ಸುಮ್ಮನಿದ್ದಾರೆ. ಪಟ್ಟಣದ ಮೀನು, ಕೋಳಿ ಮತ್ತು ಮಾಂಸದ ಅಂಗಡಿಗಳಲ್ಲಿ ಕಸ ಸಂಗ್ರಹಣೆಗಾಗಿ ಪ್ರತಿ ತಿಂಗಳು ಸಾವಿರಾರು ಹಣ ವಸೂಲಿ ಮಾಡುತ್ತಿದ್ದರೂ ಪಟ್ಟಣ ಪಂಚಾಯ್ತಿಯ ಬೊಕ್ಕಸಕ್ಕೆ ಸೇರಿಲ್ಲ ಎಂದು ಪಪಂ ಸದಸ್ಯರೇ ಈ ಹಿಂದೆ ಸಾಮಾನ್ಯ ಸಭೆಯಲ್ಲಿ ಕಿಡಿಕಾರಿದ್ದರೂ ಇದುವರೆಗೆ ಮೀನು, ಕೋಳಿ, ಮಾಂಸದ ಅಂಗಡಿಗಳಲ್ಲಿ ವಸೂಲಾಗುತ್ತಿರುವ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದಕ್ಕೆ ಮಾಹಿತಿಯೇ ಇಲ್ಲವಾಗಿದೆ. ಆದರೆ ಕೋಳಿ, ಮಾಂಸದ ಅಂಗಡಿಗಳಲ್ಲಿ ಕಸ ಸಂಗ್ರಹಣೆಗೆ ಪ್ರಾಮಾಣಿಕವಾಗಿ ಪಪಂ ವಾಹನಗಳು ತೆರಳುತ್ತಿವೆ. ಅದಕ್ಕೆ ಬೇಕಾಗುವ ಡೀಸೆಲ್ ಅನ್ನು ಪಪಂ ಸಾರ್ವಜನಿಕರ ತೆರಿಗೆ ಹಣದಲ್ಲಿ ಭರಿಸುತ್ತಿದೆ ಎಂಬುದನ್ನು ಮರೆತಿದೆ. ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಪಪಂ ಆಡಳಿತವನ್ನು ಪ್ರಶ್ನಿಸುವವರು ಯಾರೂ ಇಲ್ಲದಂತಾಗಿದೆ.
ಇದಲ್ಲದೆ ಪಟ್ಟಣ ಪಂಚಾಯ್ತಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಲಂಚ ಪಡೆಯುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಈ ಹಿಂದೆ ಶಾಸಕರಾಗಿದ್ದ ಮಸಾಲಾ ಜಯರಾಮ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ತಕ್ಕಪಾಠ ಕಲಿಸುವ ಎಚ್ಚರಿಕೆಯನ್ನೂ ನೀಡಿದ್ದರು. ಪಟ್ಟಣದ ನಾಗರೀಕರಿಂದ ಕುಡಿಯುವ ನೀರು ಸರಬರಾಜಿಗಾಗಿ ಪ್ರತಿ ಮಾಹೆ ೧೦೦ರೂ ವಸೂಲು ಮಾಡುವ ಪಟ್ಟಣ ಪಂಚಾಯ್ತಿ ನಾಗರೀಕರಲ್ಲೇ ಭೇದಭಾವ ಮಾಡುತ್ತಿದೆ. ಕೆಲವು ವಾರ್ಡ್ಗಳ ನಾಗರೀಕರಿಗೆ ೩ ದಿನಕ್ಕೊಮ್ಮೆ, ಇನ್ನು ಕೆಲವು ವಾರ್ಡ್ಗಳಿಗೆ ೫ ದಿನಕ್ಕೊಮ್ಮೆ ನೀರು ಸರಬರಾಜು ಮಾಡುವ ಮೂಲಕ ನಾಗರೀಕರಲ್ಲಿ ತಾರತಮ್ಯ ಮಾಡುತ್ತಿದೆ. ಆದರೆ ನೀರಿನ ಕಂದಾಯ ವಸೂಲಿಯಲ್ಲಿ ಮಾತ್ರ ಎಲ್ಲರೂ ಒಂದೇ ಎಂಬಂಶವನ್ನು ಪರಿಪಾಲನೆ ಮಾಡುತ್ತಿರುವುದು ಆಶ್ಚರ್ಯಕರ ಸಂಗತಿಯಾಗಿದೆ.
ಪಟ್ಟಣದಲ್ಲಿ ಬೀದಿ ನಾಯಿಗಳ ಕಾಟ ಜಾಸ್ತಿಯಾಗಿ ಸಾರ್ವಜನಿಕರು ಪಟ್ಟಣ ಪಂಚಾಯ್ತಿಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ನಾಯಿ ಹಿಡಿಯಲು ಕ್ರಮ ಕೈಗೊಂಡ ಪಪಂ ನಾಯಿ ಹಿಡಿಯುವುದಕ್ಕಾಗಿಯೇ ಅಂದಾಜು ೧ ಲಕ್ಷ ರೂ ವ್ಯಯಿಸಿತ್ತು. ಆದರೆ ಇಂದಿಗೂ ತುರುವೇಕೆರೆ ಪಟ್ಟಣದಲ್ಲಿ ನಾಯಿಗಳ ಹಾವಳಿ ತಡೆಯಲು ಸಾಧ್ಯವಾಗಿಲ್ಲ. ಹಣ ಮಾತ್ರ ಖರ್ಚಾಯಿತು, ನಾಯಿಗಳು ಪಟ್ಟಣದಲ್ಲೇ ಉಳಿಯಿತು.
ಒಟ್ಟಾರೆ ಪಟ್ಟಣ ಪಂಚಾಯ್ತಿಯ ಆಡಳಿತ ಸೂತ್ರವಿಲ್ಲದ ಗಾಳಿಪಟದಂತಾಗಿದೆ. ಅಧಿಕಾರಿಗಳು, ಸಿಬ್ಬಂದಿಗಳದ್ದೇ ದರ್ಬಾರ್ ಆಗಿದ್ದು, ನಾಗರೀಕರ ಕೆಲಸ ಕಾರ್ಯಗಳು ತ್ವರಿತಗತಿಯಲ್ಲಾಗುತ್ತಿಲ್ಲ. ಸರ್ಕಾರ ಕೂಡಲೇ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ಹೊರಡಿಸಬೇಕಿದೆ. ಸ್ಥಳೀಯ ಶಾಸಕರು ಹಾಗೂ ಪಟ್ಟಣ ಪಂಚಾಯ್ತಿ ಆಡಳಿತಾಧಿಕಾರಿಯಾಗಿರುವ ತಹಸೀಲ್ದಾರ್ ಅವರು ಪಟ್ಟಣ ಪಂಚಾಯ್ತಿ ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಬೇಕಿದೆ. ನಾಗರೀಕರ ಕೆಲಸಗಳಿಗೆ ಲಂಚ ಪಡೆಯುವ ಅಧಿಕಾರಿಗಳಿಗೆ ಶಿಸ್ತುಕ್ರಮದ ಭಾಗ್ಯ ಕರುಣಿಸಬೇಕಿದೆ.