ಸರ್ಕಾರದ ಆದೇಶವಿಲ್ಲದಿದ್ದರೂ ವಿದ್ಯಾರ್ಥಿಗಳಿಂದ ಹಣ ವಸೂಲಿ/ ಹಣವೂ ಇಲ್ಲ, ಸಮವಸ್ತ್ರವೂ ಇಲ್ಲ/ಶಾಸಕರ ಅಧ್ಯಕ್ಷತೆಯ ಕಾಲೇಜಿನ ಕರ್ಮಕಾಂಡ
ತುರುವೇಕೆರೆ: ಸರ್ಕಾರದ ಆದೇಶವಿಲ್ಲದಿದ್ದರೂ ಸಹ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕೊಡಿಸುತ್ತೇವೆಂದು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿರುವ ಆರೋಪ ಕೇಳಿಬಂದಿದೆ. ಅಲ್ಲದೆ ಹಣ ವಸೂಲಿ ಮಾಡಿ 3 ತಿಂಗಳು ಕಳೆದರೂ ಸಮವಸ್ತ್ರವನ್ನೂ ನೀಡದೆ ವಿದ್ಯಾರ್ಥಿಗಳನ್ನು ಸತಾಯಿಸುತ್ತಿರುವ ಬಗ್ಗೆ, ಹಣ ದುರುಪಯೋಗವಾಗಿರುವ ಬಗ್ಗೆ ಪೋಷಕರ ವಲಯದಲ್ಲಿ ಸಂಶಯ ಮೂಡಿದೆ. ಆ ಮೂಲಕ ೫ ದಶಕಗಳ ಇತಿಹಾಸವಿರುವ ಕಾಲೇಜು ಸಾರ್ವಜನಿಕ ವಲಯದಲ್ಲಿ ಇಂತಹದ್ದೊಂದು ಸಮವಸ್ತ್ರ ಹಗರಣದ ಆರೋಪ ಎದುರಿಸುತ್ತಿದ್ದು ಕಾಲೇಜಿನ ಇತಿಹಾಸಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.
ರಾಜ್ಯ ಸರ್ಕಾರ ವಿದ್ಯಾರ್ಥಿಗಳಲ್ಲಿ ಸಮಾನ ಭಾವ ಮೂಡಿಸುವ, ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸುರಕ್ಷತೆಯ ದೃಷ್ಟಿಯಿಂದ ವಸ್ತ್ರಸಂಹಿತೆ ಜಾರಿಗೊಳಿಸಿ ಆದೇಶಿಸಿತ್ತು. ಆದರೆ ಕಾಲೇಜಿನಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿ ಎಂದು ಆದೇಶಿಸಿತ್ತೇ ವಿನಃ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಣ ವಸೂಲಿ ಮಾಡಿ ವಿದ್ಯಾರ್ಥಿಗಳಿಗೆ ಬಟ್ಟೆ ಹೊಲಿಸಿಕೊಡಿ ಎಂದು ಆದೇಶಿಸಿರಲಿಲ್ಲ. ವಿದ್ಯಾರ್ಥಿಗಳ ಬಗ್ಗೆ ಅತೀವ ಕಾಳಜಿ ಪ್ರದರ್ಶಿಸುವುದಕ್ಕೆ ಹೋಗಿ ಇಂತಹದ್ದೊಂದು ಎಡವಟ್ಟಿಗೆ ಕಾಲೇಜು ಕಾರಣವಾಗಿದೆ.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಡಳಿತ ಸಮಿತಿಯ ಅಧ್ಯಕ್ಷರು ಕ್ಷೇತ್ರದ ಶಾಸಕರೇ ಆಗಿದ್ದಾರೆ. ಕ್ಷೇತ್ರದ ಶಾಸಕರಾಗಿರುವ ಎಂ.ಟಿ.ಕೃಷ್ಣಪ್ಪನವರ ಮನೆಯಿಂದ ಕೆಲವೇ ದೂರದಲ್ಲಿರುವ ಈ ಕಾಲೇಜಿದೆ. ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುವ ಮೊದಲು ಆಡಳಿತ ಮಂಡಳಿಯ ಅಧ್ಯಕ್ಷರಾದ ಶಾಸಕರ ಗಮನಕ್ಕೆ ತಂದಿದ್ದರೇ? ಅಥವಾ ಶಾಸಕರ ಗಮನಕ್ಕೆ ತರದೆ ಇಂತಹದ್ದೊಂದು ಕಾರ್ಯಕ್ಕೆ ಮುಂದಾದರೇ ಎಂಬ ಪ್ರಶ್ನೆ ಎದುರಾಗಿದೆ.
ಕಾಲೇಜಿನಲ್ಲಿ ಕಲೆ, ವಿಜ್ಞಾನ, ವಾಣಿಜ್ಯ ಎಂಬ ಮೂರು ವಿಭಾಗಗಳಿದ್ದು, ಸುಮಾರು 193 ವಿದ್ಯಾರ್ಥಿಗಳಿದ್ದಾರೆ. ಪ್ರತಿ ವಿದ್ಯಾರ್ಥಿಯಿಂದ ಸಮವಸ್ತ್ರಕ್ಕಾಗಿ 1200 ರೂ ಹಣ ವಸೂಲಿ ಮಾಡಲಾಗಿದೆ. ಒಟ್ಟಾರೆ 193 ವಿದ್ಯಾರ್ಥಿಗಳಿಂದ 1200 ರೂಗಳಂತೆ 2 ಲಕ್ಷದ 31 ಸಾವಿರದ 600 ರೂ ಹಣ ಸಂಗ್ರಹಿಸಿದ್ದು, ಮೂರು ತಿಂಗಳಾದರೂ ಸಮವಸ್ತ್ರ ನೀಡಿಲ್ಲ. ಕನಿಷ್ಠ ಪಕ್ಷ ವಿದ್ಯಾರ್ಥಿಗಳಿಗೆ ಸಮವಸ್ತ್ರದ ಅಳತೆಯನ್ನೂ ತೆಗೆದುಕೊಳ್ಳಲು ಟೈಲರ್ ಕಾಲೇಜಿಗೆ ಬಂದಿಲ್ಲ. ಮೂರು ತಿಂಗಳಿಂದ ಇಷ್ಟೊಂದು ಹಣ ಯಾರ ಬಳಿ ಇದೆ, ಏತಕ್ಕಾಗಿ ಬಳಸಲಾಗಿದೆ. ಸ್ವಂತಕ್ಕೆ ವಿದ್ಯಾರ್ಥಿಗಳ ಹಣ ಬಳಕೆಯಾಗಿದೆಯೋ? ಅಥವಾ ಸಮವಸ್ತ್ರದ ಬಟ್ಟೆ ಖರೀದಿಸಲಾಗಿದೆಯೋ ಎಂಬ ಮಾಹಿತಿ ತಿಳಿದುಬಂದಿಲ್ಲ. ಸರ್ಕಾರಿ ಶಾಲಾ ಕಾಲೇಜಿನಲ್ಲಿ ಹೆಚ್ಚು ಗ್ರಾಮೀಣ ಪ್ರದೇಶದ ಬಡವರ, ಕೂಲಿಕಾರ್ಮಿಕರ, ಶ್ರಮಿಕರ ಮಕ್ಕಳೇ ವ್ಯಾಸಂಗ ಮಾಡುತ್ತಿರುವುದು ಎಂಬುದು ಗಮನಾರ್ಹ ಸಂಗತಿಯಾಗಿದೆ. ಪೋಷಕರು ಮಕ್ಕಳಿಗೆ ಉತ್ತಮ ಸಮವಸ್ತ್ರ ನೀಡುತ್ತಾರೆಂಬ ಆಶಯದಿಂದ ಕಷ್ಟವೋ ನಷ್ಟವೂ ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಮಕ್ಕಳಿಗಾಗಿ ನೀಡಿದ್ದಾರೆ, ಆದರೆ ಕಾಲೇಜಿನಲ್ಲಿ ಸರ್ಕಾರದ ಆದೇಶವಿಲ್ಲದಿದ್ದರೂ ಹಣ ವಸೂಲಿ ಮಾಡಿದ್ದು ಸಮವಸ್ತ್ರ ಮಾತ್ರ ನೀಡಿಲ್ಲ. ಇದು ಪೋಷಕರಿಗೆ ಬೇಸರ ತರಿಸುವಂತಾಗಿದೆ. ಬಡವರು, ಶ್ರಮಿಕರು, ರೈತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಶಾಸಕ ಎಂ.ಟಿ.ಕೃಷ್ಣಪ್ಪನವರ ಅಧ್ಯಕ್ಷತೆಯ ಕಾಲೇಜಿನಲ್ಲಿ ಇಂತಹದ್ದೊಂದು ಸಮವಸ್ತ್ರದ ಹಗರಣ ಉಂಟಾಗಿರುವುದು ಶೋಚನೀಯ ಸಂಗತಿಯಾಗಿದೆ. ಪೋಷಕರಿಂದ ಹಣ ತಂದು ಸಮವಸ್ತ್ರಕ್ಕಾಗಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರ ಕೈಗೆ ನೀಡಿದ ವಿದ್ಯಾರ್ಥಿಗಳು ಸಮವಸ್ತ್ರ ನೀಡಿ ಎಂದು ಕೇಳಲಾಗದೆ, ಪೋಷಕರು ಸಮವಸ್ತ್ರ ಎಂದು ಕೇಳುವ ಪ್ರಶ್ನೆಗೆ ಉತ್ತರಿಸಲಾಗದೆ ಮೂಕಪ್ರೇಕ್ಷಕರಾಗಿದ್ದಾರೆ.
ಕೂಡಲೇ ಕಾಲೇಜಿನ ಅಧ್ಯಕ್ಷರೂ ಆದ ಶಾಸಕ ಎಂ.ಟಿ.ಕೃಷ್ಣಪ್ಪನವರು ಸಭೆ ಕರೆದು ವಿದ್ಯಾರ್ಥಿಗಳಿಂದ ಸಹಸ್ರಾರು ರೂ ಹಣ ವಸೂಲಿ ಮಾಡಿ ಸಮವಸ್ತ್ರ ನೀಡದೆ ಸತಾಯಿಸುತ್ತಿರುವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರನ್ನು ತರಾಟೆಗೆ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ನ್ಯಾಯಯುತವಾಗಿ ದೊರೆಯಬೇಕಾದ ಸಮವಸ್ತ್ರ ಒದಗಿಸುವಂತೆ ಸೂಚನೆ ನೀಡಬೇಕಿದೆ. ಸರ್ಕಾರದ ಆದೇಶವಿಲ್ಲದಿದ್ದರೂ ಹಣ ವಸೂಲಿ ಮಾಡಿರುವ ಪ್ರಾಂಶುಪಾಲರ ಮೇಲೆ ಇಲಾಖಾ ರೀತಿಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆಯಬೇಕಿದೆ. ಮುಂದಿನ ದಿನಗಳಲ್ಲಿ ಬಡ ಕುಟುಂಬದಿಂದ ವ್ಯಾಸಂಗಕ್ಕೆ ಬಂದಿರುವ ವಿದ್ಯಾರ್ಥಿಗಳ ಬಳಿ ಹಣ ವಸೂಲಿ ಮಾಡದಂತೆ ಎಚ್ಚರಿಕೆಯನ್ನು ಶಾಸಕರು ನೀಡಬೇಕಿದೆ.
ಈ ಬಗ್ಗೆ ಹೆಸರು ಹೇಳಲಿಚ್ಚಿಸದ ಕಾಲೇಜಿನ ಹಿರಿಯ ಉಪನ್ಯಾಸಕರೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ಸರ್ಕಾರ ಸಮವಸ್ತ್ರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ, ಆದರೆ ಹಣ ವಸೂಲಿ ಬಗ್ಗೆ ಯಾವುದೇ ಆದೇಶವಿಲ್ಲ. ವಿದ್ಯಾರ್ಥಿಗಳಿಗೆ ಪ್ರತಿ ವರ್ಷದಂತೆ ಸಮವಸ್ತ್ರವನ್ನು ಸ್ಥಳೀಯ ಬಟ್ಟೆ ಅಂಗಡಿಯೊಬ್ಬರಿಗೆ ತಿಳಿಸಿ ವಿದ್ಯಾರ್ಥಿಗಳನ್ನು ಹೊಲಿಸಿಕೊಳ್ಳುವಂತೆ ಹೇಳಲಾಗುತ್ತಿತ್ತು. ಆದರೆ ಈ ಬಾರಿ ಪ್ರಾಂಶುಪಾಲರ ಸೂಚನೆಯ ಮೇರೆಗೆ ಸಮವಸ್ತ್ರಕ್ಕಾಗಿ ಪ್ರತಿ ವಿದ್ಯಾರ್ಥಿಯಿಂದ 1200 ರೂ ವಸೂಲು ಮಾಡಲಾಗಿದೆ. ಪ್ರಾಂಶುಪಾಲರು ಹಣ ಸಂಗ್ರಹದ ಬಗ್ಗೆ ಮೆಮೊ ಹೊರಡಿಸಿದ್ದ ಕಾರಣ ಉಪನ್ಯಾಸಕರು ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿದ್ದರು. 2 ಲಕ್ಷದ 31 ಸಾವಿರದ 600 ರೂ ಹಣ ಸಂಗ್ರಹಿಸಿಸಲಾಗಿದೆ. ಪ್ರಾಂಶುಪಾಲರು ಸ್ಥಳೀಯ ಬಟ್ಟೆ ಹೊಲಿಯುವ ದರ್ಜಿಗಳನ್ನೇ ಕರೆಸಬಹುದಾಗಿತ್ತು. ಆದರೆ ಬೆಂಗಳೂರಿನಿಂದ ಟೈಲರ್ ಅನ್ನು ಕರೆಸುವುದಾಗಿ ಹೇಳಿದ್ದರು. ಇದುವರೆಗೂ ಯಾವ ಟೈಲರ್ ಸಹ ಬಂದಿಲ್ಲ. ಇದು ಪೋಷಕರ, ವಿದ್ಯಾರ್ಥಿಗಳ ಬೇಸರಕ್ಕೆ ಕಾರಣವಾಗಿದೆ. ಕಾಲೇಜಿನ ಇತಿಹಾಸದಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಕಾಲೇಜಿಗೆ ಕೆಟ್ಟ ಹೆಸರು ತರುವಂತೆ ಮಾಡಿದೆ ಎಂದರು.
*ವರದಿ: ಗಿರೀಶ್ ಕೆ ಭಟ್, ತುರುವೇಕೆರೆ*