ಕೆ.ಪಿ.ನಂಜುಂಡಿ ಜೊತೆ ಮಂಡ್ಯದ ರೈತರಿಗೆ ಸಾಥ್ ನೀಡಲು ಹೊರಟ ವಿಶ್ವಕರ್ಮರು
ತುರುವೇಕೆರೆ: ಮಂಡ್ಯದಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡು ರೈತಪರ ಧ್ವನಿ ಎತ್ತಲು ತುರುವೇಕೆರೆ ತಾಲೂಕು ವಿಶ್ವಕರ್ಮ ಸಮಾಜದ ಬಾಂದವರು ಮಂಡ್ಯಕ್ಕೆ ತೆರಳಿದರು.
ಮಂಡ್ಯದಲ್ಲಿ ರೈತರು ನಡೆಸುತ್ತಿರುವ ಕಾವೇರಿ ಹೋರಾಟದಲ್ಲಿಂದು ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಭಾಗವಹಿಸಲಿದ್ದು, ಅವರೊಂದಿಗೆ ರೈತಪರ ಹೋರಾಟದಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧೆಡೆಯಿಂದ ಸಹಸ್ರಾರು ಮಂದಿ ವಿಶ್ವಕರ್ಮ ಬಾಂದವರು ತೆರಳಲಿದ್ದು, ಅದೇ ರೀತಿ ತುರುವೇಕೆರೆಯ ಸುಮಾರು 50ಕ್ಕೂ ಅಧಿಕ ಮಂದಿ ವಿಶ್ವಕರ್ಮ ಬಾಂದವರು ತೆರಳಿದರು.
ಮಾಧ್ಯಮದೊಂದಿಗೆ ಮಾತನಾಡಿದ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಅರುಣ್ ಮಾತನಾಡಿ, ಕಾವೇರಿ ಕರ್ನಾಟಕದ ಜೀವನದಿಯಾಗಿದೆ. ಕರ್ನಾಟಕದಲ್ಲಿ ಮಳೆಯಿಲ್ಲದೆ ಬೆಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ.ಅಣೆಕಟ್ಟೆಗಳಲ್ಲಿನೀರಿಲ್ಲ. ಸರ್ಕಾರ ಬರಗಾಲ ಘೋಷಣೆ ಮಾಡಿದೆ. ಆದರೂ ಸಹ ತಮಿಳುನಾಡು ನೀರು ಹರಿಸುವಂತೆ ಕ್ಯಾತೆ ತೆಗೆದಿದೆ. ಸರ್ಕಾರವೂ ಸಹ ತಮಿಳುನಾಡಿನ ಆಶಯದಂತೆ ಕಾವೇರಿ ನೀರು ಹರಿಸುತ್ತಾ ರಾಜ್ಯದ ರೈತರಿಗೆ ಅನ್ಯಾಯ ಮಾಡುತ್ತಿದೆ. ಕನ್ನಡಿಗರಿಗೆ, ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸಹಿಸಲು ಸಾಧ್ಯವೇ ಇಲ್ಲ. ಸರ್ಕಾರ ಕೂಡಲೇ ತನ್ನ ನಿಲುವನ್ನು ಬದಲಿಸಿ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಮಂಡ್ಯದಲ್ಲಿ ಸಹಸ್ರಾರು ರೈತರು ಹಗಲಿರುಳೆನ್ನದೆ ಕಾವೇರಿ ನೀರಿಗಾಗಿ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಕಂಡೂಕಾಣದಂತೆ ಸುಮ್ಮನಿದೆ. ರೈತರ ಹೋರಾಟ ಬೆಂಬಲಿಸಿ, ಹೋರಾಟದಲ್ಲಿ ಪಾಲ್ಗೊಳ್ಳಲು ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಮಂಡ್ಯಕ್ಕೆ ಆಗಮಿಸಲಿದ್ದು, ಅವರೊಂದಿಗೆ ಹೋರಾಟದಲ್ಲಿ ನಾವು ಸಹ ಭಾಗವಹಿಸಲಿದ್ದೇವೆ ಎಂದರು.
ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ದೇವರಾಜ್, ಉಪಾಧ್ಯಕ್ಷ ನಾಗರಾಜಾಚಾರ್, ಪ್ರೇಮಕುಮಾರ್, ಕಾರ್ಯದರ್ಶಿ ಸತೀಶ್, ಖಜಾಂಚಿ ಸೀನಾಚಾರ್, ಸಂಘಟನಾ ಕಾರ್ಯದರ್ಶಿ ಗೌತಮ್, ಅಶೋಕ್, ರಂಗಾಚಾರ್, ನಿರ್ದೇಶಕರಾದ ರಮೇಶ್, ವಸಂತ್, ವೀರಭದ್ರಾಚಾರ್, ರವಿ, ನಂದೀಶ್ ಸೇರಿದಂತೆ ಹಲವರು ಮಂಡ್ಯಕ್ಕೆ ತೆರಳಿದರು.
*ವರದಿ: ಗಿರೀಶ್ ಕೆ ಭಟ್, ತುರುವೇಕೆರೆ*