ಪಟ್ಟಣದ ವ್ಯಾಪ್ತಿಯ ಸಮಸ್ಯೆಗಳನ್ನು ಪರಿಹರಿಸಲು ಕೈಗೊಳ್ಳಬೇಕಿರುವ ಕ್ರಮದ ಬಗ್ಗೆ ಉಪವಿಭಾಗಾಧಿಕಾರಿಗಳು, ಅಧಿಕಾರಿಗಳ ಜೊತೆ ಸಭೆ ನಡೆಸಿ ಯಾವ ಯಾವ ಕಾರ್ಯಗಳನ್ನು ಯಾರು ನಿರ್ವಹಿಸಬೇಕು ಎಂದು ಸ್ಪಷ್ಟವಾಗಿ ಸೂಚಿಸಬೇಕು. ಮುಖ್ಯಾಧಿಕಾರಿ ಸೇರಿ ಇಡೀ ಪುರಸಭೆಯ ಮಾಹಿತಿಗಳನ್ನು ಸ್ಥಾಯಿ ಸಮಿತಿಗೆ ವರದಿ ಮಾಡಬೇಕು ಎಂದು ಸೂಚಿಸಿದ ಶಾಸಕ ಸಿ.ಬಿ.ಸುರೇಶ್ ಬಾಬು
ಚಿಕ್ಕನಾಯಕನಹಳ್ಳಿ : ಪಟ್ಟಣದ ಯಾವುದೇ ವಾರ್ಡ್ ಗಳಿಗೆ ಮುಖ್ಯಾಧಿಕಾರಿ ಭೇಟಿ ನೀಡಿಲ್ಲ. ಕಸ ವಿಲೇವಾರಿಯಾಗುತ್ತಿಲ್ಲ. ಒಳಚರಂಡಿ ಕಾಮಗಾರಿಯೂ ಸರಿಯಾಗಿಲ್ಲ. ಬೀದಿದೀಪಗಳ ನಿರ್ವಹಣೆಯಂತೂ ಇಲ್ಲವೇ ಇಲ್ಲ, ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ ಆದರೂ ಪುರಸಭಾ ಮುಖ್ಯಾಧಿಕಾರಿ ಕ್ರಮವಹಿಸಿಲ್ಲ ಎಂದು ಪುರಸಭಾ ಸದಸ್ಯರು ಆರೋಪಿಸಿದರು.
ಪುರಸಭೆ ಸಭಾಂಗಣದಲ್ಲಿ ಉಪವಿಭಾಗಾಧಿಕಾರಿ ಬಿ.ಕೆ.ಸಪ್ತಶ್ರೀ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆ ನಡೆಯಿತು. ಈ ವೇಳೆ ಪುರಸಭಾ ಸದಸ್ಯರ, ಮುಖ್ಯಾಧಿಕಾರಿ ವಿರುದ್ದ ಆರೋಪಿಸಿ ಪುರಸಭೆ ಮುಖ್ಯಾಧಿಕಾರಿಗೆ ಪಟ್ಟಣದ 23 ವಾರ್ಡ್ ಗಳು ಹಾಗೂ ಸದಸ್ಯರ ಪರಿಚಯವೇ ಇಲ್ಲ, ಸ್ಥಾಯಿ ಸಮಿತಿ ಬಗ್ಗೆ ಕಿಂಚಿತ್ತೂ ಗೌರವವಿಲ್ಲ. ವಾರ್ಡ್ ಸಮಸ್ಯೆ ಬಗೆಹರಿಸುವಂತೆ ತಿಳಿಸಿದರೂ ಹಾರಿಕೆ ಉತ್ತರ ನೀಡುತ್ತಾರೆ. ಕೂಡಲೇ ಮುಖ್ಯಾಧಿಕಾರಿ ವಿರುದ್ದ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಸದಸ್ಯರು ತಿಪಟೂರು ಉಪವಿಭಾಗಾಧಿಕಾರಿಗೆ ಒತ್ತಾಯಿಸಿದರು.
ಪುರಸಭೆ ಸದಸ್ಯೆ ಪೂರ್ಣಿಮ ಮಾತನಾಡಿ, ವಾರ್ಡ್ ನಂ.1ರಲ್ಲಿ ಪೈಪ್ ಲೈನ್ ಸಮಸ್ಯೆಯಿಂದ ಕುಡಿಯುವ ನೀರಿನ ಅಭಾವವಿದ್ದು, ಬಗೆಹರಿಸುವಂತೆ ಮುಖ್ಯಾಧಿಕಾರಿಗೆ ತಿಳಿಸಿದರೆ ಸ್ಪಂದಿಸಲೇ ಇಲ್ಲ ಎಂದು ಆರೋಪಿಸಿದರು.
ಪುರಸಭೆ ಬಜೆಟ್, ನಿರ್ವಹಿಸಿದ ಕಾಮಗಾರಿಗಳು, ಪಟ್ಟಣದ ಅಭಿವೃದ್ದಿಗೆ ತೆಗೆದುಕೊಂಡಿರುವ ಕ್ರಮಗಳ ಸ್ಥಾಯಿ ಸಮಿತಿಗೆ ಮಾಹಿತಿಯನ್ನೇ ಮುಖ್ಯಾಧಿಕಾರಿ ನೀಡುವುದಿಲ್ಲ, ಕೇಳಿದರೆ ಬೇಜವಬ್ದಾರಿ ಉತ್ತರ ನೀಡುತ್ತಾರೆ ಎಂದು ಸದಸ್ಯ ರೇಣುಕ ಪ್ರಸಾದ್ (ಶ್ಯಾಮ್ ) ಆರೋಪಿಸಿದರು.
ಉಪವಿಭಾಗಾಧಿಕಾರಿ ಬಿ.ಕೆ.ಸಪ್ತಶ್ರೀ ಮಾತನಾಡಿ, ಪುರಸಭೆ ಸದಸ್ಯರಿಗೆ ಗೌರವ ನೀಡುವುದು, ಸ್ಥಾಯಿ ಸಮಿತಿ ಅಧ್ಯಕ್ಷರು ಸೇರಿ ಎಲ್ಲ ಸದಸ್ಯರಿಗೆ ಆಡಳಿತ ಬೆಳವಣಿಗೆಗಳ ಮಾಹಿತಿ ತಿಳಿಸುವುದು ಮುಖ್ಯಾಧಿಕಾರಿ ಕರ್ತವ್ಯವಾಗಿದ್ದು, ಸೌಜನ್ಯದಿಂದ ವರ್ತಿಸುವಂತೆ ಸೂಚಿಸಿದರು.
ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿ ಎಂದು ಆರೋಪಿಸಿದ ಸದಸ್ಯ ಸಿ.ಡಿ.ಸುರೇಶ್, ಒಳಚರಂಡಿ ಕಾಮಗಾರಿ ಪ್ರಾರಂಭಿಸುವ ಮುನ್ನ ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣಕ್ಕೆ ಸ್ಥಳ ಗುರುತಿಸಿ ಅವುಗಳನ್ನು ವಶಕ್ಕೆ ಪಡೆದು, ಬಳಿಕ ಒಳಚರಂಡಿ ನಿರ್ಮಿಸಿ, ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಕಾಮಗಾರಿ ನಿರ್ವಹಿಸಬೇಕು, ಆದರೆ ಒಳಚರಂಡಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ ಹುಡುಕಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಪ್ರಶ್ನೆಗೆ ಧ್ವನಿಗೂಡಿಸಿದ ಸದಸ್ಯ ರೇಣುಕಪ್ರಸಾದ್, ಒಳಚರಂಡಿ ಕಾಮಗಾರಿ ನಂತರದಲ್ಲಿ ಈ ಹಿಂದಿನ ಪಿಟ್ ಗುಂಡಿಗಳನ್ನು ರಸ್ತೆಯಲ್ಲಿ ಹಾಗೇ ಬಿಡುತ್ತಿರುವುದು ಅನಾಹುತಕ್ಕೆ ಕಾರಣವಾಗುತ್ತದೆ ಎಂದರು.
ಸದಸ್ಯ ಮಲ್ಲೇಶಯ್ಯ, ಪಟ್ಟಣದಲ್ಲಿ ಬೇಕಾಬಿಟ್ಟಿಯಾಗಿ ಒಳಚರಂಡಿ ಮಾಡುತ್ತಿದ್ದಾರೆ, ವಾರ್ಡ್ ನಂ 15ರ ಉಡೇವು ಬೀದಿಯಲ್ಲಿ ಬರಿ ಚೇಂಬರ್ ನಿರ್ಮಿಸಿದ್ದಾರೆ. ಅಲ್ಲಿ ಪೈಪ್ ಗಳನ್ನೇ ಅಳವಡಿಸಿಲ್ಲ. ಇದೇ ಕಾರಣವಿಟ್ಟುಕೊಂಡು ಆಗಿದ್ದಾಂಗೆ ರಸ್ತೆಯನ್ನು ಅಗೆಯುತ್ತಾರೆ ಇಂದರಿಂದ ಜನರು ಓಡಾಡಲು ಸಮಸ್ಯೆಯಾಗುತ್ತಿದೆ ಎಂದು ದೂರಿದರು.
ಸದಸ್ಯರ ಆರೋಪಕ್ಕೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ, ಈಗಾಗಲೇ 6 ಕಡೆಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟವರಿಗೆ ಆದೇಶ ಮಾಡುವುದಾಗಿ ತಿಳಿಸಿದರು.
ಪುರಸಭಾ ಸದಸ್ಯ ರಾಜಶೇಖರ್ ಮಾತನಾಡಿ, ಪೌರ ಕಾರ್ಮಿಕರ ಸಂಖ್ಯೆ ಕಡಿಮೆಯಿದ್ದು ಘನ ತ್ಯಾಜ್ಯ ಸಮರ್ಪಕ ವಿಲೇವಾರಿಗೆ ಸಮಸ್ಯೆಯಾಗಿದ್ದು, ವಾರ್ಡ್ ಗೊಬ್ಬರಂತೆ ಪೌರ ಕಾರ್ಮಿಕರನ್ನು ನೇಮಕ ಮಾಡುವಂತೆ ತಿಳಿಸಿದರು. ಸದಸ್ಯರ ಮಾತಿಗೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ 700 ಜನರಿಗೆ ಒಬ್ಬರಂತೆ ಪೌರ ಕಾರ್ಮಿಕರು ಇರಬೇಕು, ಅದರಂತೆ ಪಟ್ಟಣದ 30 ಸಾವಿರ ಜನಸಂಖ್ಯೆಗೆ ಈಗಾಗಲೇ 29 ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು. ಅವಶ್ಯಕತೆ ಇದ್ದರೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದರು.