ಡಿಸೆಂಬರ್ ಅಂತ್ಯದೊಳಗೆ ಜೆಡಿಎಸ್, ಬಿಜೆಪಿ ಮೈತ್ರಿ ಸರ್ಕಾರ: ಮಸಾಲಾ ಜಯರಾಮ್ ಭವಿಷ್ಯ
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ
ತುರುವೇಕೆರೆ: ಡಿಸೆಂಬರ್ ಅಂತ್ಯದೊಳಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದ್ದು, ನಂತರದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ಸರ್ಕಾರದಲ್ಲಿ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ ಸಚಿವರಾಗಲಿದ್ದಾರೆ ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ಭವಿಷ್ಯ ನುಡಿದರು.
ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರವಾಗಿ ದಂಡಿನಶಿವರದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಜನವಿರೋಧಿ, ರೈತವಿರೋಧಿ ನೀತಿಯಿಂದ ಜನತೆ ಬೇಸತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಎಲ್ಲಡೆ ಒಂದು ಹನಿ ಮಳೆಯಿಲ್ಲ. ಈ ಸರ್ಕಾರ ತೊಲಗಿದರೆ ಸಾಕಪ್ಪ ಎಂದು ಜನ ಕಾಯುತ್ತಿದ್ದಾರೆ. ಸರ್ಕಾರ ಹೋದ ತಕ್ಷಣ ಮಳೆ ಬರುತ್ತದೆಂಬ ನಂಬಿಕೆಯೂ ಜನರಲ್ಲಿ ಮನೆಮಾಡಿದೆ ಎಂದರು.
ತುರುವೇಕೆರೆ ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ. ಕ್ಷೇತ್ರದಲ್ಲಿ ಚಿತ್ರನಟ ಜಗ್ಗೇಶ್ ಅವರೇ ಕಾಂಗ್ರೆಸ್ನ ಕೊನೆಯ ಶಾಸಕರಾಗಿದ್ದಾರೆ. ಅವರೂ ಸಹ ಕೇವಲ ೪೫ ದಿನ ಶಾಸಕರಾಗಿದ್ದು ತದನಂತರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡರು. ತುರುವೇಕೆರೆ ಕ್ಷೇತ್ರದಲ್ಲಿ ಏನಾದರೂ ನೀರಾವರಿ ಯೋಜನೆಗಳು, ಶಾಲಾ ಕಾಲೇಜು, ಗ್ರಾಮೀಣ ರಸ್ತೆಗಳು ಸೇರಿದಂತೆ ಅಭಿವೃದ್ದಿ ಕೆಲಸಗಳು ನಡೆದಿದೆ ಎಂದರೆ ಅದು ಮಸಾಲಾ ಜಯರಾಮ್, ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಹೆಚ್.ಬಿ.ನಂಜೇಗೌಡರ ಕೊಡುಗೆಗಳು ಎಂದು ವ್ಯಾಖ್ಯಾನಿಸಿದರು.
ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ನರೇಂದ್ರ ಮೋದಿಯವರು ಪ್ರಧಾನಿಯಾಗಿ ಹ್ಯಾಟ್ರಿಕ್ ಬಾರಿಸಲಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ನರೇಂದ್ರ ಮೋದಿಯವರೇ ದೇಶ ಮುನ್ನಡೆಸಲು ಸಮರ್ಥರು ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರೂ ಸಹ ಎನ್ಡಿಎ ಮೈತ್ರಿಕೂಟ ಸೇರ್ಪಡೆಗೊಂಡು ಬೆಂಬಲ ಸೂಚಿಸಿದ್ದಾರೆ. ಈ ಬಾರಿ ಕೇಂದ್ರದಲ್ಲಿ ನಮೋ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಕುಮಾರಸ್ವಾಮಿಯವರು ಮಂತ್ರಿಯಾಗಲಿದ್ದಾರೆ ಎಂದ ಅವರು, ರಾಜ್ಯದಲ್ಲಿ ಹೆಚ್.ಡಿ.ದೇವೇಗೌಡರು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಸೇರಿದಂತೆ ಜೆಡಿಎಸ್, ಬಿಜೆಪಿಯ ಮುಖಂಡರು, ಕಾರ್ಯಕರ್ತರು ಒಮ್ಮತದಿಂದ 28 ಲೋಕಸಭಾ ಕ್ಷೇತ್ರದಲ್ಲೂ ಮೈತ್ರಿ ಅಭ್ಯರ್ಥಿಯ ಗೆಲ್ಲಿಸಬೇಕೆಂದು ಶ್ರಮಿಸುತ್ತಿದ್ದಾರೆ. ಅದೇ ರೀತಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ನಾನು ಹಾಗೂ ಎಂ.ಟಿ.ಕೃಷ್ಣಪ್ಪನವರು ಜೋಡೆತ್ತಿನ ರೀತಿ ತುರುವೇಕೆರೆ ಕ್ಷೇತ್ರದಿಂದ ಒಂದು ಲಕ್ಷದ 20 ಸಾವಿರ ಮತಗಳನ್ನು ವಿ.ಸೋಮಣ್ಣನವರಿಗೆ ಕೊಡಿಸುವ ಶಪಥ ಮಾಡಿದ್ದೇವೆ. ಎರಡೂ ಪಕ್ಷದ ಕಾರ್ಯಕರ್ತರು ಒಮ್ಮತದಿಂದ ವಿ.ಸೋಮಣ್ಣನವರ ಗೆಲುವಿಗೆ ಶ್ರಮಿಸಬೇಕೆಂದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರು ಒಕ್ಕಲಿಗ ಸಮುದಾಯಕ್ಕೆ ಸೇರಿದವರೆಂದು ಒಕ್ಕಲಿಗ ಸಮುದಾಯದವರು ಮರುಳಾಗಬೇಡಿ, ಅವರನ್ನೂ ಒಮ್ಮೆ ಸಂಸದರನ್ನಾಗಿ ಮಾಡಿದ್ದೇವೆ, ಆದರೆ ಕ್ಷೇತ್ರದ ಅಭಿವೃದ್ದಿಗೆ ಅವರ ಕೊಡುಗೆ ಏನೂ ಇಲ್ಲದಾಗಿದೆ. ಕಳೆದ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕಣಕ್ಕಿಳಿದಿದ್ದರು. ಅವರು ಒಕ್ಕಲಿಗರಲ್ಲವೇ? ದೇವೇಗೌಡರನ್ನು ಸೋಲಿಸಿದ ಪುಣ್ಯಾತ್ಮನಿಗೆ ಇಂದು ಒಕ್ಕಲಿಗರ ಮತ ಬೇಕೆ? ಅಗತ್ಯವಿಲ್ಲ. ದೇವೇಗೌಡರು ಗೆದ್ದಿದ್ದರೆ ಮೋದಿ ಸರ್ಕಾರದಿಂದ ಹೆಚ್ಚಿನ ಅನುದಾನ ತರುತ್ತಿದ್ದರು. ಆದರೆ ಕಡಿಮೆ ಮತಗಳ ಅಂತರದಿಂದ ಸೋಲಿಸಿದರು. ಈ ಬಾರಿ ಚುನಾವಣೆಯಲ್ಲಿ ಜಾತಿ ರಾಜಕಾರಣವನ್ನು ಪಕ್ಕಕ್ಕಿಟ್ಟು ದೇಶದ ಭವಿಷ್ಯಕ್ಕಾಗಿ ಎನ್ಡಿಎ ಅಭ್ಯರ್ಥಿ ವಿ.ಸೋಮಣ್ಣವರನ್ನು ಗೆಲ್ಲಿಸಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಲು ಸಹಕಾರ ನೀಡಬೇಕೆಂದರು.
ತಾಲೂಕಿನ ಸಂಪಿಗೆ ಶ್ರೀನಿವಾಸ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ ಪ್ರಚಾರಕ್ಕೆ ಚಾಲನೆ ನೀಡಿದ ಮೈತ್ರಿ ಪಕ್ಷದ ನಾಯಕರು ಸಂಪಿಗೆ, ಸಂಪಿಗೆ ಹೊಸಹಳ್ಳಿ, ಹುಲ್ಲೇಕೆರೆ, ದಂಡಿನಶಿವರ, ಅಮ್ಮಸಂದ್ರ, ಹಡವನಹಳ್ಳಿ, ಬಾಣಸಂದ್ರ, ಲೋಕಮ್ಮನಹಳ್ಳಿ, ಆನೆಕೆರೆ, ಕೊಡಗೀಹಳ್ಳಿ, ಮುನಿಯೂರು, ಕಲ್ಲೂರು ಕ್ರಾಸ್, ಪೆದ್ದನಹಳ್ಳಿ ಗ್ರಾಮ ಪಂಚಾಯ್ತಿಯ ಕೇಂದ್ರ ಸ್ಥಾನದಲ್ಲಿ ಪ್ರಚಾರ ನಡೆಸಿದರು. ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ, ಚುನಾವಣಾ ಉಸ್ತುವಾರಿ, ಶಾಸಕ ಗೋಪಾಲಯ್ಯ, ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ, ನಾಗಮಂಗಲ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಪುತ್ರ ಚೇತನ್ ಗೌಡ ಬಿಜೆಪಿ ಅಧ್ಯಕ್ಷ ಮೃತ್ಯುಂಜಯ, ಜೆಡಿಎಸ್ ಮುಖಂಡರಾದ ಸಿದ್ದಗಂಗಯ್ಯ, ಕುಶಾಲ್ ಕುಮಾರ್ ಸೇರಿದಂತೆ ನೂರಾರು ಜೆಡಿಎಸ್, ಬಿಜೆಪಿ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೈತ್ರಿ ಅಭ್ಯರ್ಥಿ ಪರ ಮತಯಾಚಿಸಿದರು.